‘ಏನ್ರಪ್ಪಾ, ಈ ಕಡಿಯಿಂದ ಪಾದಯಾತ್ರೆ ಒಂಟಿರೋರು, ಆ ಕಡೆಯಿಂದ ಜನಾಂದೋಲನ ಮಾಡ್ತಿರೋರು ರಸ್ತೆನಾಗೇ ಪವಾಡ ಬಯಲು ಕಾರ್ಯಕ್ರಮ ಹಮ್ಮಿಕೊಂಡವ್ರಲ್ಲ’ ಎಂದ ಗುದ್ಲಿಂಗ ಹರಟೇಕಟ್ಟೇಲಿ!
‘ಪವಾಡ ಎಲ್ಲಲಾ ಐತೆ? ಮಳೆಗೆ ಕೊಡೆ ಹಿಡ್ಕಂಡು, ರಸ್ತೆಬದಿ ಪಕೋಡ ತಿಂದ್ಕಂಡು ಒದ್ದಾಡ್ತಾವ್ರೆ’ ಎಂದ ಮಾಲಿಂಗ.
‘ಅದೇನೋ ಸರಿ ಬುಡು, ಆದ್ರೆ ನಾಯಕ್ರು ತಮ್ ಉದ್ದೇಶನೇ ಮರ್ತು ಒಬ್ರಿಗೊಬ್ರು ಆಸ್ತಿ ಬಯಲು ಮಾಡ್ತೀವಿ ಅಂತ ಸವಾಲು ಹಾಕ್ತಾವ್ರಲ್ಲ’.
‘ಅದ್ ಬಿಡು, ಎಲ್ರಿಗೂ ಗೊತ್ತಿರೋದೇ. ಆಸ್ತಿ ಬಯಲು ಮಾಡ್ತೀವಿ ಅಂತ ಸವಾಲು ಆಕ್ತಾರೆ, ಆಮೇಲೆ ಅವಕಾಶ ಸಿಕ್ರೆ ಅಧಿಕಾರನೇ ಪಾಲ್ ಹಾಕ್ಕತಾರೆ. ಆದ್ರೆ ಆಸ್ತಿ ಬಯಲು ಮಾಡಕ್ಕೂ ಪವಾಡ ಬಯಲು ಮಾಡಕ್ಕೂ ಏನ್ಲಾ ಸಂಬಂಧ?’
‘ರಾಜಕೀಯ ಅಂದ್ರೆ ಪವಾಡಗಳ ಸಂತೆ ಕಣ್ಲಾ. ಆದಾಯದ್ ಮೂಲನೇ ಇಲ್ದೆ ಒಬ್ಬೊಬ್ರ ಆಸ್ತಿನೂ ಐದು ವರ್ಷದಲ್ಲಿ ಐದು ಪಟ್ಟು, ಹತ್ತು ಪಟ್ಟು ಹೆಚ್ಚಾಯ್ತದೆ. ಇದು ಶೂನ್ಯದಿಂದ ಸೃಷ್ಟಿ ಮಾಡೋ ಪವಾಡ ಅಲ್ವೇನ್ಲಾ?’
‘ಹ್ಞೂಂ ಕಣ್ಲಾ! ಎಲೆಕ್ಷನ್ ಕಮಿಷನ್ನೋರು ಕಣ್ಣಿಗೆ ಎಣ್ಣೆ ಬುಟ್‍ಕಂಡ್ ಕಾದ್ರೂ ‘ರಂ’ಗೋಲಿ ಕೆಳಗೆ ತೂರಿ ಕೋಟಿ ಕೋಟಿ ಚಚ್ಚಾಕ್ತಾರೆ. ಇದು ಒಂಥರಾ ಮಾಯಾಸೃಷ್ಟಿ’ ಎಂದ ಕಲ್ಲೇಶಿ.
‘ಇನ್ನು ರಸ್ತೆ, ಚರಂಡಿ, ಸೇತುವೆಗಳನ್ನ ಮಂಗಮಾಯ ಮಾಡ್ತಾರಲ್ಲ ಅದಂತೂ ದೊಡ್ ಹೌದಿನಿ ಟೆಕ್ನಿಕ್ಕೇ! ಮಾಲೇ ಇಲ್ದೆ ಬಿಲ್ ಆಕ್ಸೋದು, ನಿಗಮದ ದುಡ್ನ ಬ್ಯಾಂಕಿಂದ ಮಂಗಮಾಯ ಮಾಡೋದು, ಬೇನಾಮಿ ಆಸ್ತಿ ಇವೆಲ್ಲಾ ಪವಾಡಗಳೇ ಅಲ್ವೇನ್ಲಾ?’
‘ಅಷ್ಟೆಲ್ಲಾ ತಾರಾತಿಗಡಿ ಮಾಡಿನೂ ದೇವಸ್ಥಾನ, ಮಠಗಳ್ನ ಸುತ್ಕಂಡು, ಇದೆಲ್ಲಾ ದೇವರೇ ಕೊಟ್ಟಿದ್ದು ಅಂತ ಜನ್ರನ್ನ ನಂಬುಸ್ತಾವ್ರೆ’.
‘ಇದ್ ತಪ್ಪು, ಸರ್ಕಾರ ಮೂಢನಂಬಿಕೆ ವಿರುದ್ಧ ಜಾಗೃತಿ ಮೂಡಿಸ್ಬೇಕು ಕಣ್ಲಾ’.
‘ಅಯ್ಯೋ! ಮೂಢನಂಬಿಕೆ ಅಳಿಸೋದಿರ್‍ಲಿ, ಸರ್ಕಾರಕ್ಕೆ ಸದ್ಯ ಮುಡಾದಲ್ಲಿ ಏನೂ ನಡ್ದಿಲ್ಲ ಅಂತ ‘ಮುಡಾನಂಬಿಕೆ’ ಉಳ್ಸುದ್ರೆ ಸಾಕಾಗಿದೆ’ ಎಂದ ಪರ್ಮೇಶಿ. ಹೌದ್ಹೌದು ಎಂದು ಎಲ್ಲಾ ಜೋರಾಗಿ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.