‘ಏನಣ್ಣೋ ಬಿಸಿನೆಸ್ ಫುಲ್ ಜೋರಾಗಿರಬೇಕಲ್ಲ. ಒಂದೇ ಸ್ಥಳದಲ್ಲಿ ಎರಡೆರಡು ಸಮಾವೇಶ, ಡಬಲ್ ಡಬಲ್ ಕಮಾಯಿ’ ಕಂಟ್ರಾಕ್ಟರ್ ಮುದ್ದಣ್ಣನ ಕಾಲೆಳೆದ ಸ್ನೇಹಿತ ವಿಜಿ.
‘ಏನ್ ಕಮಾಯಿ ಬಿಡೊ ಮಾರಾಯ, ಈ ರಾಜಕೀಯದವರ ಸಹವಾಸವೇ ಬೇಡ ಅನಿಸಿಬಿಡುತ್ತೆ’ ಬೇಸರದಲ್ಲಿ ಹೇಳಿದ ಮುದ್ದಣ್ಣ.
‘ಪೆಂಡಾಲ್ ಹಾಕಿದ ದುಡ್ಡು ಕೊಟ್ಟಿಲ್ವ?’
‘ಎರಡು ಸಮಾವೇಶಕ್ಕೂ ಅದೇ ಪೆಂಡಾಲ್, ಫ್ಯಾನು, ಜನರೇಟರ್, ಎಲ್ಇಡಿ ಸ್ಕ್ರೀನು ಹಾಕ್ತಿರೋದ್ರಿಂದ ಅರ್ಧ ದುಡ್ಡು ಕೊಡ್ತೀವಿ ಅಂತಿದ್ದಾರೆ’.
‘ಹೇಗೂ ಮತ್ತೊಂದು ಪಾರ್ಟಿಯವರು ಅರ್ಧ ದುಡ್ಡು ಕೊಡ್ತಾರಲ್ಲ ಬಿಡು’ ನಕ್ಕ ವಿಜಿ.
‘ಅದು ಹೆಂಗೆ ಸರಿಯಾಗುತ್ತೋ ಮಾರಾಯ, ಎರಡು ದಿನ ಪೆಂಡಾಲ್ ಹಾಕಿ ಒಂದೇ ದಿನದ ಬಾಡಿಗೆ ತಗೊಂಡಂಗಾಗಲ್ವ’ ಸಿಟ್ಟಿನಲ್ಲಿ ಕೇಳಿದ ಮುದ್ದಣ್ಣ.
‘ಇರಲಿ, ಜನರಿಗೋಸ್ಕರ ಪಾದಯಾತ್ರೆ ಮಾಡಿದಾರೆ, ಅಡ್ಜಸ್ಟ್ ಮಾಡ್ಕೊ’.
‘ಪಾದಯಾತ್ರೆ ಶುರು ಆದಾಗಿನಿಂದ ಇವರದು ಇದೇ ಕಿರಿಕಿರಿ ಮಾರಾಯ… ದಾರಿಯುದ್ದಕ್ಕೂ ಅಲ್ಲಲ್ಲಿ ಭಾಷಣ ಮಾಡೋದಿದೆ, ಅಲ್ಲೆಲ್ಲ ಚೇರ್ ಹಾಕಿಸು ಅಂದಿದ್ರು. ಚನ್ನಪಟ್ಟಣದಲ್ಲಿ ಗಣ್ಯರ ಸಂಖ್ಯೆಯಷ್ಟು ಕುರ್ಚಿ ಹಾಕಿದ್ದೆ. ಒಂದು ಎಕ್ಸ್‌ಟ್ರಾ ಹಾಕು ಚನ್ನಪಟ್ಟಣದ ನಾಯಕ ತಡವಾಗಿ ಬರಬಹುದು, ಅವರು ಬಂದಾಗ ಚೇರ್ ಇರಲಿಲ್ಲ ಅಂದ್ರೆ ಕಷ್ಟ ಆಗುತ್ತೆ ಅಂದ್ರು, ಮೈಸೂರಿನಲ್ಲಿ ಒಂದು ಚೇರ್ ಎಕ್ಸ್‌ಟ್ರಾ ಹಾಕಿದರೆ, ಆ ಚೇರ್ ತೆಗೆದುಬಿಡು ಹಾಸನದ ಯುವನಾಯಕ ಬಂದು ಕೂತರೆ ಕಷ್ಟ ಆಗುತ್ತೆ ಅಂದ್ರು’ ತಲೆ ಚಚ್ಚಿಕೊಂಡ.
‘ಬಾಡಿಗೆ ಪೂರ್ತಿ ಕೊಡಿ. ನನಗೇನೂ ಉಳಿಯಲ್ಲ, ಲಾಭವೂ ಇಲ್ಲ ಅಂತ ಕೇಳಬೇಕಿತ್ತು’
‘ಅದನ್ನೂ ಕೇಳಿದೆ. ಈ ಪಾದಯಾತ್ರೆ, ಸಮಾವೇಶದಿಂದ ನಮಗೇನು ಲಾಭ ಆಯ್ತು ಅಂತಾನೇ ಇನ್ನೂ ಗೊತ್ತಾಗ್ತಿಲ್ಲ. ಇನ್ನು, ಪೆಂಡಾಲ್ ಹಾಕಿದ ನಿನಗೇನ್ ಲಾಭ ಆಗಬೇಕು ಹೇಳು ಅಂದ್ರು’ ಎಂದ ಬೇಸರದಲ್ಲಿ.
‘ಮತ್ತೀಗ ಏನ್ಮಾಡ್ತೀಯ?’
‘ಮೂರೂ ಪಕ್ಷದವರಿಂದ ನನಗೆ ಅನ್ಯಾಯ ಆಗಿದೆ, ನ್ಯಾಯ ಕೊಡಿ ಅಂತ ಮೈಸೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡ್ತೀನಿ’ ಎಂದ !
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.