ಶನಿವಾರ, ಸೆಪ್ಟೆಂಬರ್ 26, 2020
23 °C

ಚುರುಮುರಿ | ಕೋವಿಡ್ ಕೀಟಲೆ

ಮಣ್ಣೆ ರಾಜು Updated:

ಅಕ್ಷರ ಗಾತ್ರ : | |

Prajavani

‘ಡಾಕ್ಟರೇ, ಮೂರು ದಿನದಿಂದ ವಿಪರೀತ ಕೆಮ್ಮು, ಟ್ರೀಟ್‍ಮೆಂಟ್ ಕೊಡಿ...’ ಫ್ಯಾಮಿಲಿ ಡಾಕ್ಟರ್ ಮನೆಗೆ ಬಂದಿದ್ದ ಶಂಕ್ರಿ ಸಮಸ್ಯೆ ಹೇಳಿಕೊಂಡ.

‘ಬಂದು ಹತ್ತು ನಿಮಿಷವಾದರೂ ಒಮ್ಮೆಯೂ ಕೆಮ್ಮಲಿಲ್ಲವಲ್ಲ ನೀನು’ ಡಾಕ್ಟರ್ ಕೇಳಿದರು.

‘ಸಾರ್, ಕೆಮ್ಮು ಇವರಿಗಲ್ಲ, ನಮ್ಮ ಪಕ್ಕದ ಮನೆಯವನಿಗೆ’ ಹೆಂಡ್ತಿ ಸುಮಿ ಹೇಳಿದಳು.

‘ಪಕ್ಕದ ಮನೆಯವನು ಕೆಮ್ಮಿದರೆ ನಿನಗ್ಯಾಕೆ ಟ್ರೀಟ್‍ಮೆಂಟು? ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆನಾ...?’

‘ಹೇಳಿಕೇಳಿ ಇದು ಕೋವಿಡ್‍ಕಾಲ. ಪಕ್ಕದ ಮನೆ ಕೆಮ್ಮಿನ ವೈರಸ್ ಗಾಳಿಯಲ್ಲಿ ಬರುತ್ತೋ ಕಿಟಕಿಯಲ್ಲಿ ಬರುತ್ತೋ ಯಾರಿಗೆ ಗೊತ್ತು? ನಮ್ಮ ಆರೋಗ್ಯದ ಬಗ್ಗೆ ನಾವು ಕಾಳಜಿ ವಹಿಸಬೇಕು’ ಅಂದ ಶಂಕ್ರಿ.

ಅಷ್ಟೊತ್ತಿಗೆ ಡಾಕ್ಟರ್ ಹೆಂಡ್ತಿ ಕಾಫಿ ತಂದುಕೊಡುತ್ತಾ, ‘ಗೌರಿ ಹಬ್ಬ ಜೋರಾ?’ ಅಂತ ಸುಮಿಯನ್ನು ಕೇಳಿದರು.

‘ಕೊರೊನಾ ಕಷ್ಟದಲ್ಲಿ ಗೌರಿಯನ್ನು ಕೂರಿಸುವುದೋ ಹಬ್ಬದ ಆಚರಣೆ ನಿಲ್ಲಿಸುವುದೋ ಅಂತ ಯೋಚನೆ ಮಾಡ್ತಿದ್ದೀನಿ. ನಿಮ್ಮ ಹಬ್ಬ ಜೋರಾ?’ ಕೇಳಿದಳು ಸುಮಿ.

‘ಡಾಕ್ಟರಿಗೆ ಬಿಸಿನೆಸ್ಸೇ ಇಲ್ಲರೀ, ನಮಗೆ ದುಡ್ಡಿನ ಚಿಂತೆ ಹತ್ತಿದೆ’ ಡಾಕ್ಟರ್ ಹೆಂಡ್ತಿ ಸಂಕಟಪಟ್ಟರು.

‘ಊರು ತುಂಬಾ ಕಾಯಿಲೆ ಇರುವಾಗ ಡಾಕ್ಟರ್‌ಗಳು ಆರ್ಥಿಕವಾಗಿ ಆರೋಗ್ಯವಾಗಿ ಇರ್ತಾರೆ ಅಲ್ವಾ ಮೇಡಂ?!’- ಶಂಕ್ರಿ.

‘ದೊಡ್ಡ ಮೀನು ಬಂದು ಸಣ್ಣ ಮೀನುಗಳನ್ನು ನುಂಗಿತು ಎನ್ನುವಂತೆ ಕೊರೊನಾ ಆರ್ಭಟದಲ್ಲಿ ಸಾಮಾನ್ಯ ಕಾಯಿಲೆಗಳು ನಾಪತ್ತೆಯಾಗಿ
ಬಿಟ್ಟಿವೆ. ನಾಲ್ಕು ತಿಂಗಳಿನಿಂದ ತಲೆ ನೋವು, ಹೊಟ್ಟೆ ನೋವು, ವಾಂತಿ, ಭೇದಿ ಅಂತ ಯಾವ ಪೇಷೆಂಟ್‍ಗಳೂ ಬರ್ತಿಲ್ಲ’ ಅಂದ್ರು ಡಾಕ್ಟರ್.

‘ಹೌದು, ಬೈಕಿನಲ್ಲಿ ಹಾರಿಬಿದ್ದವರು, ಕೆಸರಲ್ಲಿ ಜಾರಿಬಿದ್ದು ಗಾಯ ಮಾಡಿಕೊಂಡವರಿಗೆ ಟಿಂಚರ್ ಹಾಕಿ ಬ್ಯಾಂಡೇಜ್ ಕಟ್ಟುತ್ತಿದ್ದಾರೆ. ಪಂಚರ್ ಅಂಗಡಿ ಥರಾ ನಮ್ಮ ಕ್ಲಿನಿಕ್ ಟಿಂಚರ್ ಅಂಗಡಿ ಆಗಿಬಿಟ್ಟಿದೆ...’ ಡಾಕ್ಟರ್ ಹೆಂಡ್ತಿ ನೊಂದುಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು