ಸೋಮವಾರ, ಜನವರಿ 18, 2021
15 °C

ಚುರುಮುರಿ: ‘ಏಲಿಯನ್ಸ್’ಗೂ ಕೊರೊನಾ?

ಸುಧೀಂದ್ರ Updated:

ಅಕ್ಷರ ಗಾತ್ರ : | |

 ‘ಏಲಿಯನ್ಸ್’ಗೂ ಕೊರೊನಾ?

ಸಣ್ಣ ನಿದ್ದೆ ತೆಗೆದು ಕಣ್ಣು ಬಿಡುವಷ್ಟರಲ್ಲಿ 40 ಲಕ್ಷ ಕೋಟಿ ಕಿ.ಮೀ ದೂರದಲ್ಲಿನ ‘ಪ್ರಾಕ್ಸಿಮಾ ಸೆಂಟೌರಿ’ ನಕ್ಷತ್ರದ ವ್ಯೋಮನಿಲ್ದಾಣ ಬಂದಿತ್ತು. ಏಣಿಯಿಳಿದೊಡನೆ ಚಾಲಕರಹಿತ ವಾಹನವೊಂದು ನನ್ನನ್ನು ಸೀದಾ ಕೊರೊನಾ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದಿತು. ಪಿ.ಪಿ.ಇ. ಕಿಟ್ ಧರಿಸಿದ್ದ ಏಲಿಯನ್‍ಗಳು ನನ್ನ ಕಣ್ಣು, ಮೂಗು, ಬಾಯಿ, ಕಿವಿಗಳೊಳಗೆಲ್ಲಾ ಕಡ್ಡಿಯಾಡಿಸಿ, ಸ್ಯಾಂಪಲ್ ತೆಗೆದುಕೊಂಡು ಹೊರಗೆ ಬಿಟ್ಟವು.

‘ಪ್ರಾಕ್ಸಿಮಾ ಸೆಂಟೌರಿ’ಯ ವಿಜ್ಞಾನಿಗಳು ನನ್ನನ್ನು ತಮ್ಮ ‘ಪಾಸಾ’ ಕೇಂದ್ರಕ್ಕೆ ಕರೆದೊಯ್ಯಲು ಕಾದಿದ್ದರು. ಅಷ್ಟರಲ್ಲೇ ಟಿ.ವಿ ಕ್ಯಾಮೆರಾಗಳನ್ನು ಹಿಡಿದ ನರರೂಪದ ರೊಬಾಟ್‍ಗಳ ದಂಡು ನನ್ನನ್ನು ಸುತ್ತುವರಿಯಿತು. ಭೂಮಿಯಿಂದ ಬಂದ ವಿಜ್ಞಾನಿಗೆ ಎಷ್ಟೊಂದು ಗೌರವ ಕೊಡುತ್ತಿದ್ದಾರೆಂಬ ಖುಷಿಯಿಂದ, ಕೆದರಿದ ತಲೆಗೂದಲನ್ನು ಸರಿಪಡಿಸಿಕೊಂಡೆ. ಚಕಚಕನೆ ಕ್ಯಾಮೆರಾಗಳು ಫ್ಲ್ಯಾಷ್ ಆದವು.

ದಿನವಿಡೀ ಮೀಟಿಂಗುಗಳ ಮೇಲೆ ಮೀಟಿಂಗು. ರಾತ್ರಿ ರೂಮಿಗೆ ಹೋದೆ. ಗೋಡೆಯೇ ಟಿ.ವಿ ತೆರೆಯಾಗಿ ಬದಲಾಯಿತು. ‘ಬಿಗ್ ಎಕ್ಸ್’ಕ್ಲೂಸಿವ್ ಪ್ರೋಗ್ರಾಮ್’ನ ಹೆಡ್‍ಲೈನೊಂದು ಮಿಂಚಿನಂತೆ ರಾರಾಜಿಸಿತು. ನಾನು ವ್ಯೋಮ ನಿಲ್ದಾಣದಲ್ಲಿ ಇಳಿದ ಚಿತ್ರಗಳು ಗೋಚರಿಸಿದವು. ರೊಬಾಟ್ ಆ್ಯಂಕರ್‌ ಒಮ್ಮೆಲೇ ಬ್ರೇಕಿಂಗ್ ನ್ಯೂಸ್‍ನ ಢಮರುಗ ಬಾರಿಸಿತು. ‘ಭೂಮಿಯಿಂದ ಬೇತಾಳನ ಆಗಮನ,  ಅಂಟೀಸ್ತಾನಾ ನಮಗೆ ಕೊರೊನಾ?’, ‘ಪಿಶಾಚಿಯಂತೆ ಪೀಡಿಸ್ತಾನಾ ಪ್ರಾಕ್ಸಿಮಾನಾ?’, ‘ಭೂಮಿಯ ಬ್ರಹ್ಮರಾಕ್ಷಸ’...

ಭಯವಾಯ್ತು, ಏನೂ ತೋಚದೆ ‘ಪಾಸಾ’ ವಿಜ್ಞಾನಿಗಳಿಗೆ ಫೋನ್ ಮಾಡಿದೆ, ಎಂಗೇಜಾಗಿತ್ತು. ಬಹುಶಃ ಸುದ್ದಿ ತಿಳಿದ ನಮ್ಮ ಕನ್ನಡ ಟಿ.ವಿ ಚಾನೆಲ್‍ಗಳೂ ‘ಬಿಗ್ ಬ್ರೇಕಿಂಗ್’ಗಾಗಿ ಅವರನ್ನು ಸಂಪರ್ಕಿಸುತ್ತಿದ್ದವೇನೊ? ರೂಮಿನ ಬಾಗಿಲು ಒಡೆದು ಯಾರೋ ನುಗ್ಗಿದಂತಾಯ್ತು. ‘ನನ್ನ ಹತ್ತಿರ ಕೊರೊನಾ ನೆಗೆಟಿವ್ ಸರ್ಟಿಫಿಕೇಟ್ ಇದೆ, ಅರೆಸ್ಟ್ ಮಾಡಬೇಡಿ’ ಎಂದು ಜೋರಾಗಿ ಕಿರುಚಿದೆ.

‘ಟೀವಿ ನೋಡ್ಕೊಂಡು ನಿದ್ದೆ ಮಾಡೋ ದುರಭ್ಯಾಸವನ್ನು ಯಾವಾಗ ಬಿಡ್ತೀರೋ’ ಅಂತ ಹೆಂಡತಿ ತಲೆಯ ಮೇಲೆ ಮೊಟಕಿದಳು. ಕಣ್ಬಿಟ್ಟಾಗ ಬೆಳಕಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು