ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಬಾಗಿಲು ಬಡಿದ ವೈರಸ್ಸು!

Last Updated 11 ಜೂನ್ 2021, 19:30 IST
ಅಕ್ಷರ ಗಾತ್ರ

ಲಾಕ್‍ಡೌನ್ ಸಡಿಲ ಮಾಡಿದ್ರು ಅಂತ ತೆಪರೇಸಿ ಪೇಟೆ ಕಡೆ ಹೋಗಿ ಹಾಗೇ ಸುತ್ತಾಡಿ ಮನೆಗೆ ಬಂದ. ಮರುದಿನ ಬೆಳಿಗ್ಗೆ ಗಂಟಲು ಕೆರೆತ, ಮೈ ಕೈ ನೋವು. ಹಾಸಿಗೆಯಲ್ಲೇ ಬಿದ್ದುಕೊಂಡಿದ್ದ ತೆಪರೇಸಿಗೆ ಯಾರೋ ಬಾಗಿಲು ಬಡಿದಂತಾಯಿತು. ‘ಯಾರು?’ ಎಂದ.

‘ನಾನು ವೈರಸ್ಸು..., ಒಳಗೆ ಬರಬೇಕು, ಬಾಗಿಲು ತೆಗಿ...’

‘ಏಯ್ ಬ್ಯಾಡೋ ಮಾರಾಯಾ, ಊರೆಲ್ಲ ಹಾರಾಡಿದ್ದು ಇನ್ನೂ ಸಾಕಾಗಿಲ್ಲೇನು? ಎಲ್ಲ ಕಡಿ ನೀ ಇಳೀತಿದಿ ಅಂತದಾರೆ, ಮತ್ತ ನನ್ ಮ್ಯಾಲ ಏರಾಕ ಬಂದೀಯಲ್ಲ?’

‘ಇಳಿಯಾಕ ನಾ ಮುಖ್ಯಮಂತ್ರಿ ಕುರ್ಚಿ ಮ್ಯಾಲ ಕುಂತೀನೇನು ಮಂಗ್ಯಾ, ಹೈಕಮಾಂಡ್ ಅಲ್ಲ, ನಾ ಯಾರು ಹೇಳಿದ್ರು ಕೇಳಾವಲ್ಲ...’

‘ನಿನ್ತೆಲಿ, ಎಲ್ಲ ಕಡಿ ನಿನ್ ಬಾಲ ಕಟ್ ಆಗೇತಿ ಅಂತ ನಂಗೂ ಗೊತ್ತು. ಹೋಗೋ ಮುಂಚೆ ನನ್ ಕಡಿ ಯಾಕ ಬಂದಿ? ನಾ ಯಾರು ಗೊತ್ತೇನು, ಟಿ.ವಿ. ರಿಪೋಟ್ರು... ನಿನ್ನ ಹಗಲು ರಾತ್ರಿ ತೆಲಿ ಮ್ಯಾಲ ಹೊತ್ತು ಮೆರೆಸಿದೀನಿ... ರಣಕೇಕೆ, ಮರಣಮೃದಂಗ, ಸುನಾಮಿ, ತಾಂಡವನೃತ್ಯ ಅಂತೆಲ್ಲ ಹೊಗಳಿದೀನಿ...’

‘ಅದಕ್ಕೇ ನಾನು ಬಂದಿರೋದು. ನಿನ್ ಕೈ ಕುಲುಕಿ ನಿಂಗೊಂದು ಥ್ಯಾಂಕ್ಸ್ ಹೇಳಿ ಹೋಗಾಣ ಅಂತ’.

‘ಹೆದರಿಸ್ಬೇಡೋ ಮಾರಾಯ, ನೀ ಹೋಗೋದು ಹೋಗ್ತಿ, ನನ್ನ ಆಸ್ಪತ್ರಿ ಸೇರಿಸಬೇಕು ಅಂತ ಮಾಡೀ ಏನು?’

‘ನೀನು ನಿನ್ ಟೀವಿಯಲ್ಲಿ ನನ್ ಹೆಸರು ಹೇಳಿ ಎಷ್ಟ್ ಜನಕ್ಕೆ ಹೆದರಿಸಿಲ್ಲ, ನಾನೇನಾದ್ರು ಕೇಳಿದೀನಾ? ನಿನ್ನ ಕೈ ಕುಲುಕೇ ನಾ ಹೋಗೋದು, ಬಾಗಿಲು ತೆಗಿ...’

‘ಲೇ ತಮಾ, ವೈರಸ್ಸು... ಒಳಗೆ ನನ್ ಹೆಂಡ್ತಿ ಅದಾಳೆ. ಅಕಿ ಮುಂದೆ ನೀ ಯಾವ ಲೆಕ್ಕ, ಬಾ ನೋಡ್ಕೋತೀನಿ ಅಂತ ತೆಪರೇಸಿ ಏಳೋಕೆ ಹೋಗಿ ಜೋಲಿ ತಪ್ಪಿ ಕೆಳಕ್ಕೆ ಬಿದ್ದ. ಕಣ್ಣು ಬಿಟ್ಟರೆ ಮಂಚದಿಂದ ಕೆಳಕ್ಕೆ ಬಿದ್ದಿದ್ದ.

ಹೆಂಡ್ತಿ ಪಮ್ಮಿ ಎದುರಿಗೇ ನಿಂತಿದ್ದಳು, ಕೈಯಲ್ಲಿ ಒಗ್ಗರಣೆ ಸೌಟಿತ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT