ಶುಕ್ರವಾರ, ಜನವರಿ 27, 2023
27 °C

ಚುರುಮುರಿ: ಗಂಡಾಂತರ

ನಾರಾಯಣ ರಾಯಚೂರ್ Updated:

ಅಕ್ಷರ ಗಾತ್ರ : | |

Prajavani

‘ಇಲ್ಲಿ ನೋಡೇ, ಹರಿಯಾಣದಲ್ಲಿ ಶ್ವಾನ ಕಲ್ಯಾಣವಂತೆ! ‘ಶೆರೂ ವೆಡ್ಸ್ ಸ್ವೀಟಿ’ ಅಂತ ದೊಡ್ಡ ಕಟೌಟು, ಮದುವೆ ಪೋಷಾಕು, ಬ್ಯಾಂಡು, ಹಾರ, ಬೀಗರು ಎಲ್ಲಾ ಜಮಾಯಿಸಿದಾರೆ’.

‘ಓ ಹೌದಾ! ‘ಎವೆರಿ ಡಾಗ್ ಹ್ಯಾಸ್ ಹಿಸ್ ಡೇ’ ಅಂತ ಇಂಗ್ಲಿಷ್ ಮೇಷ್ಟ್ರು ಹೇಳ್ತಿದ್ದರು. ಅದಿರ್ಲಿ, ನನ್ನದೊಂದು ಸಮಸ್ಯೆ ಇದೆ. ಇನ್ನೂರಕ್ಕೆ ಹತ್ತು ಸಾವಿರ ಆದರೆ ಸಾವಿರಕ್ಕೆ ಎಷ್ಟು? ಬೇಗ ಹೇಳಿ’.

‘ಏನೇ, ತ್ರೈಮಾಸಿಕ ಲೆಕ್ಕ ಕೇಳ್ತಾಯಿದೀಯಾ, ಏನು ನೋಡಿದೆ ಪೇಪರ್‌ನಲ್ಲಿ?’

‘ಇನ್ನೇನ್ರೀ, ಸಂಸಾರದ ಸುದ್ದಿ ನಮ್ ಕಣ್ಣಿಗೆ ಬೀಳ್ತಾವೆ. ಟಿಕೆಟ್‌ಗೆ ಅರ್ಜಿ, ಯಾರಿಗೆ ಯಾವ ಕ್ಷೇತ್ರ, ಯಾವ ಗೋಡೆಗೆ ಯಾವ ಬಣ್ಣ ಇವೆಲ್ಲಾ ನಮಗ್ಯಾಕೆ?’

‘ಸರಿ, ಸರಿ... ಹೇಳೀಗ ನಿನ್ನ ಒಗಟಿನ ಉತ್ತರ’.

‘ವಧು-ವರ ಸಮಾವೇಶದಲ್ಲಿ ಇನ್ನೂರು ಹುಡುಗಿಯರಿಗೆ ಹತ್ತು ಸಾವಿರ ಹುಡುಗರು ಅರ್ಜಿ ಹಾಕೊಂಡಿದ್ದಾರಂತೆ, ನೋಡಿ ಇಲ್ಲಿ, ಹ್ಯಾಗೆ ಜಾತ್ರೇಲಿ ಸೇರಿದ್ಹಾಗೆ ಸೇರಿದಾರೆ ಗಂಡು ಹೆತ್ತೋರು!’

‘ಎಲ್ಲಾ ಚಕ್ರದ ಚಲನೆ ತರಹ! ಒಮ್ಮೆ ಅದು ಮೇಲು, ಇನ್ನೊಮ್ಮೆ ಇದು ಮೇಲು!’

‘ಹೌದೌದು, ಮೇಲು- ಫೀಮೇಲು. ಇದು, ನಾವೇ ಮಾಡಿಕೊಂಡಿದ್ದು. ಹೆಣ್ಣುಮಗು ಅಂದ್ರೆ ಕೀಳಾಗಿ ಕಂಡು, ಭ್ರೂಣಹತ್ಯೆ, ಗರ್ಭಪಾತ ಮಾಡಿಸಿಕೊಂಡು, ಈಗ ಅನುಪಾತ ಸರಿಯಿಲ್ಲಾಂದ್ರೆ? ಅಂತೂ ಗಂಡು ಹೆತ್ತೋರ ಪಾಡು ನಾಯಿಪಾಡು!’

‘ಹಾಂ! ಮತ್ತೆ ಬಂದ್ಯಾ, ಶ್ವಾನಕಲ್ಯಾಣಕ್ಕೆ. ಅಲ್ಲಾ... ಹೆಣ್ಣು ನಾಯಿ- ಗಂಡು ನಾಯಿಗಳ ಅನುಪಾತ ಸರಿಯಾಗಿಯೇ ಇರಬೇಕು’.

‘ಅವು ಪ್ರಾಣಿಗಳೂರೀ. ನಿಸರ್ಗದ ಮಾತು ಕೇಳೋವು, ನಿಸರ್ಗದ ನಿಯಮಕ್ಕೆ ಎದುರಾಡದೆ ಪಾಲಿಸೋವು. ಈ ಸ್ವಾರ್ಥಿ, ದುರಹಂಕಾರಿ ಮನುಷ್ಯರ ಹಾಗಲ್ಲ’.

‘ಚಪ್ಪಾಳೆ... ಚಪ್ಪಾಳೆ... ಚಪ್ಪಾಳೆ!’

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.