ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ತಾಳಿಬಾನ್!

Last Updated 19 ಆಗಸ್ಟ್ 2021, 21:45 IST
ಅಕ್ಷರ ಗಾತ್ರ

ಬೆಳ್ಳಂಬೆಳಿಗ್ಗೆ ದುಬ್ಬೀರ ಇನ್ನೂ ಹಾಸಿಗೆಯಲ್ಲಿರುವಾಗಲೇ ಮೊಬೈಲ್ ಕುಂಯ್‌ಗುಟ್ಟಿತು. ನೋಡಿದರೆ ಗುಡ್ಡೆ! ‘ಯಾಕೋ ಗುಡ್ಡೆ, ಇಷ್ಟ್ ಬೆಳಿಗ್ಗೆ ಫೋನ್ ಮಾಡಿದೀಯ, ಏನ್ಸಮಾಚಾರ?’ ದುಬ್ಬೀರ ಆಕಳಿಸುತ್ತ ವಿಚಾರಿಸಿದ.

‘ವಿಷಯ ಗೊತ್ತಿಲ್ವ? ನಮ್ ಟೀವಿ ರಿಪೋಟ್ರು ತೆಪರೇಸಿನ ಆಸ್ಪತ್ರಿಗೆ ಸೇರ‍್ಸಿದಾರೆ ಕಣಲೆ...’

‘ಹೌದಾ? ಯಾರ ಜೊತಿಗೋ ಜಗಳ ಆಡಿರ್ತಾನೆ, ಆಗ ಯಾರೋ ಹಿಗ್ಗಾಮುಗ್ಗ ಇಕ್ಕಿರ್ತಾರೆ...’

‘ಥೋ ಅದೆಲ್ಲ ಅಲ್ಲ ಕಣಲೆ’.

‘ಮತ್ತೇನು? ರಾತ್ರಿ ಫುಲ್ ಟೈಟಾಗಿ ಎಲ್ಲೋ ಚರಂಡಿ ಗಿರಂಡಿಗೆ ಬಿದ್ದರ‍್ತಾನೆ...’

‘ನಿನ್ತೆಲಿ, ಅದೂ ಅಲ್ಲಲೆ, ಆಸ್ಪತ್ರಿಗೆ ನಾನೂ ಹೋಗಿದ್ದೆ’.

‘ಮತ್ತೆ ಅದೇನಾತು, ಏನ್ ಕತಿ ಬೊಗಳು’.

‘ಇದೇ ಪ್ರಶ್ನೆನ ನಂಗೆ ಡಾಕ್ಟ್ರು ಕೇಳಿದ್ರು. ಹೇಳಾಕೆ ಒಂಥರಾ ಆತು’.

‘ಹೌದಾ? ಅಂಥದೇನಾತಲೆ, ತೆಪರನ ಹೆಂಡ್ತಿ ಪಮ್ಮಕ್ಕ ಇರ‍್ಲಿಲ್ವ?’

‘ಇದ್ಲು, ನಿನ್ನಿ ರಾತ್ರಿ ಮನೇಲಿ ಇಬ್ರೂ ಪರ್ಸಿ ಪೈಕಿ ಪೈಲ್ವಾನರ ತರ ಕುಸ್ತಿಗೆ ಬಿದ್ದಿದ್ರಂತೆ. ಪಮ್ಮಕ್ಕ ಟೀವಿ ರಿಮೋಟ್ ತೆಗೆದು ತೆಪರನ ಮೇಲೆ ಬೀಸಿ ಒಗೆದ್ಲಂತೆ. ಅದು ಅವನ ಕಣ್ಣಿಗೆ ಬಿದ್ದು ಕಣ್ಣು ಬಾತುಗಂಡೇತಿ...’

‘ಓ ಹಂಗಾರೆ ಇದು ಬಾತಿಂಗ್ ನ್ಯೂಸ್! ಸರಿ, ಕುಸ್ತಿ ಯಾಕಂತೆ?’

‘ತೆಪರೇಸಿ ತಾನು ತಾಲಿಬಾನ್ ನ್ಯೂಸ್ ನೋಡ್ಬೇಕು ಅಂತ, ಪಮ್ಮಕ್ಕ ತಾನು ‘ತಾಳಿಭಾಗ್ಯ’ ಸೀರಿಯಲ್ ನೋಡ್ಬೇಕು ಅಂತ ಟೀವಿ ರಿಮೋಟ್‌ಗೆ ಕಿತ್ತಾಡಿದ್ರಂತೆ. ಮಾತಿಗೆ ಮಾತು ಬೆಳೆದು ಕೊನಿಗೆ ಮನೇಲಿದ್ದ ಸಾಮಾನೆಲ್ಲ ಹಾರಾಡಿದ್ವಂತೆ...’

‘ಹಂಗಾರೆ ದೊಡ್ಡ ಗದ್ಲಾನೇ ಆಗೇತಿ. ಇದನ್ನ ಏನಂತ ಕರೀಬಹುದು ಹೇಳು ನೋಡಾಣ...’

‘ಏನಂತ ಕರೀಬಹುದು?’

‘ತಾಳಿಬಾನ್!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT