ಮಂಗಳವಾರ, ನವೆಂಬರ್ 29, 2022
29 °C

ಚುರುಮುರಿ: ಚಿನ್ನದಂಥಾ ಮಾತು

ಲಿಂಗರಾಜು ಡಿ.ಎಸ್. Updated:

ಅಕ್ಷರ ಗಾತ್ರ : | |

Prajavani

‘ಚಿನ್ನ ತಕ್ಕಬರುಮಾ ಅಂತ ಹೋಗಿದ್ದೋ ಕನೋ! ಅದಕ್ಕೆ ಲೇಟಾಯ್ತು’ ಅಂದರು ತುರೇಮಣೆ.

‘ಅಲ್ಲ ಸಾ, ‘ಒಡವೆ ಚಿನ್ನ ತಗಂಡ್ರೆ ನಮ್ಮತಾವು ಮಾಡುಗೂಲಿ ಇಲ್ಲ, ತ್ಯಾಮಾನ ಅರ್ಧಕ್ಕರ್ದ ಕೊಟ್ರೆ ಸಾಕು. ಈಗಲೇ ತಕ್ಕಬುಡಿ’ ಅಂತ ಬೆಳಗಾನ ಪುಂಗ್ತರಲ್ಲಾ’ ಅಂತ ಕೇಳಿದೆ.

‘ಅಣೈ, ನನಗೊಂದು ಅನುಮಾನ! ‘ಮನೇಲಿ ಚಿನ್ನ ಯಾಕೆ ಮಡಿಕಂಡಿದೀರಾ? ನಮ್ಮತಾವೇ ಅಡ ಇಟ್ಟು ಸಾಲ ತಗಳಿ, ಇಲ್ಲಾ ಮಾರಿಬುಟ್ಟು ಮಸಾಲೆದೋಸೆ ತಿಂದುಕಳಿ’ ಅಂತ ಸಿನಿಮಾದವು ಅಡ್ವೈಸು ಮಾಡ್ತವ್ರಲ್ಲಾ? ಇದೆಂಗೆ?’ ಚಂದ್ರು ಗಾಬರಿ ಬಿದ್ದ.

‘ಸಿನಿಮಾದವುಕ್ಕೆ ಕ್ಯಾಮೆ ಏನದ್ಲಾ? ಇಂತದ್ದೇ ಕುಡೀರಿ, ರಮ್ಮಿ ಆಡ್ರಿ, ಪಾನ್ ಮಸಾಲೆ ತಿನ್ರಿ ಅಂತ ಚಿತಾವಣೆ ಮಾಡ್ತವೆ!’ ತುರೇಮಣೆ ಸಿಡಿದರು.

‘ಅವುರು ದಬ್ಬಾಕಿದ್ದು ಅಷ್ಟರಗೇ ಅದೆ. ಬ್ಯಾರೇದೇನಾದ್ರೂ ಹೇಳಿ ಸಾ!’ ಅಂತಂದೆ.

‘ಅವುಕ್ಕೇನ್ಲಾ ಲಂಗುಲಗಾಮಿಲ್ದೆ ಬತ್ತವೆ! ಸೇತುವೆ, ಫ್ಲೈ ಓವರುಗಳೆಲ್ಲಾ ಕಿಸ್ಕಂಡು ಬಿದ್ದೋಯ್ತಿದ್ರೆ ಬಿಬಿಎಂಪಿಗೆ ಖುಷಿಯಾಗ್ಯದಂತೆ. ಈಜಿಪುರದ ಮೇಲ್ಸೇತುವೆ ಈಜಿಯಾಗಿ ಮುಗೀತಿಲ್ಲ. ಬೆಂಗಳೂರು ರಸ್ತೆಗುಂಡಿ, ಟ್ರಾಫಿಕ್ ನಡಂತರದೇಲಿ ಮದುವೆ ಫೋಟೋ ಶೂಟ್- ಒಂದು ಲವ್ ಸ್ಟೋರಿ! ಕಾವೇರಿ ನದಿಗೆ ರಾಜಕಾಲುವೆ ಸಂಪರ್ಕ. ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡೋಣ ಬನ್ರಿ. ದಮ್ಮಿದೆಯಾ? ತಾಕತ್ತಿದೆಯಾ? ಭ್ರಷ್ಟಾಚಾರ ಮಾಡದೆ ಬದುಕೋದು ಸುಲಭಲ್ಲ. ವಿದ್ಯುತ್ ದರ ಮತ್ತೆ ಏರಿಕೆ. ಕಾಲುವೆ-ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ನಿರಂತರ. ಪ್ರಭಾವಿಗಳನ್ನೂ ಬಿಡುವುದಿಲ್ಲ. ಕೇಂದ್ರದಿಂದ 14,000 ಕೋಟಿ ಜಿಎಸ್‍ಟಿ ಬಾಕಿ. ಅದಾನಿ ಸಂಪತ್ತು ವರ್ಷಕ್ಕೆ 5.88 ಲಕ್ಷ ಕೋಟಿಯಂಗೆ ಏರಿ ಐದು ವರ್ಷದೇಲಿ ಹದಿನೈದು ಪಟ್ಟಾಗ್ಯದೆ’ ಅಂದ್ರು ತುರೇಮಣೆ.

‘ಗಿಲೀಟಿನ ಮಾತು ಸಾಕು. ಒಂದೇ ಒಂದು ಚಿನ್ನದಂಥಾ ಮಾತು ಹಂಗನ್ನಿ ಸಾ’ ಅಂತಂದೆ.

‘ನ ಖಾವೂಂಗ ನಾ ಖಾನೇ ದೂಂಗ’ ಅಂತಂದ್ರು.

ಈ ಮಾತು ಕೇಳಿದ ಯಂಟಪ್ಪಣ್ಣ ಪಿಳಿಪಿಳಿ ಕಣ್‌ಬಿಡೋದಾ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.