ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ತೆರೆದ ಬಾಗಿಲು

Last Updated 31 ಆಗಸ್ಟ್ 2021, 19:32 IST
ಅಕ್ಷರ ಗಾತ್ರ

‘ಅಂತೂ ಮಕ್ಕಳು ಮರಳಿ ಶಾಲೆಗೆ ಹೋಗುವಂತೆ ಆಯ್ತಲ್ಲಾ...’ ಶಂಕ್ರಿಗೆ ಸಮಾಧಾನ.

‘ಆದರೇನು, ಕಲಿಯಲು ಪಠ್ಯಪುಸ್ತಕ ಇಲ್ಲ, ನಲಿಯಲು ಗ್ರೂಪ್ ಗೇಮ್ಸ್ ಇಲ್ಲ. ಟೀಚರ್‌ಗಳು ಮಕ್ಕಳಿಗೆ ಅದೇನು ಹೇಳಿಕೊಡ್ತಾರೋ...’ ಸುಮಿಗೆ ಸಮಾಧಾನವಿಲ್ಲ.

‘ಪಠ್ಯಪುಸ್ತಕ ಬರುವವರೆಗೂ ಮಕ್ಕಳಿಗೆ ಕೊರೊನಾ ಪಾಠ ಹೇಳಿ ಅಂತ ಸರ್ಕಾರ ಸಿಲೆಬಸ್ ಕೊಟ್ಟಿರಬಹುದು. ಮಾಸ್ಕ್, ಅಂತರ ಕಾಯ್ದುಕೊಳ್ಳುವ ಬಗ್ಗೆ ಅರಿವು ಮೂಡಿಸೋದು, ಕೊರೊನಾದಿಂದ ಆಗಿರುವ ಪರಿಣಾಮದ ಬಗ್ಗೆ ಮಕ್ಕಳಿಗೆ ಬೋಧನೆ ಮಾಡಬಹುದು’.

‘ಹಾಜರಾತಿ ಕಡ್ಡಾಯವಿಲ್ಲವಂತೆ, ಮಕ್ಕಳು ಸ್ಕೂಲಿಗೆ ಬಾರದಿದ್ದರೂ ಕೇಳಬಾರದಂತೆ. ಯಾವಾಗ ಬೇಕಾದ್ರೂ ಬರಬಹುದು, ಹೋಗಬಹುದಂತೆ. ಜೆಡಿಎಸ್ ಪಕ್ಷದ ರೀತಿ ಶಾಲೆಯ ಪರಿಸ್ಥಿತಿ ತೆರೆದ ಬಾಗಿಲು ಆಗಿದೆ ಕಣ್ರೀ...’

‘ಜೆಡಿಎಸ್ ಪಕ್ಷವು ನಾಯಕರನ್ನು ಸಿದ್ಧಪಡಿ ಸುವ ತರಬೇತಿ ಶಾಲೆ ಇದ್ದಂಗೆ. ಇಲ್ಲಿ ಕಲಿತು ಬಲಿತ ನಾಯಕರು ಉನ್ನತ ಕಲಿಕೆ, ಪದವಿ ಪಡೆಯಲು ಬೇರೆ ಪಕ್ಷಗಳಿಗೆ ಹೊರಟರೆ, ಟಿ.ಸಿ. ಕೊಟ್ಟು ಬೀಳ್ಕೊಡುತ್ತೇವೆ ಅಂತ ಕುಮಾರಣ್ಣ ಹೇಳಿದ್ದಾರೆ’.

‘ಇಂಥಾ ಪ್ರತಿಭಾ ಪಲಾಯನದಿಂದ ಪಕ್ಷಕ್ಕೆ ನಷ್ಟ ಆಗೋದಿಲ್ವೇನ್ರೀ?’

‘ಆಗೋಲ್ಲವಂತೆ, ಜೆಡಿಎಸ್ ತನ್ನ ಕಾರ್ಯಕರ್ತರನ್ನು ನಂಬಿದೆಯಂತೆ, ನಾಯಕರನ್ನು ನೆಚ್ಚಿಕೊಂಡಿಲ್ಲವಂತೆ. ಬೇರೆ ಪಕ್ಷಗಳಿಗೆ ಇನ್ನಷ್ಟು ನಾಯಕರನ್ನು ತಯಾರಿಸಿ ಕಳಿಸುವ ಸಾಮರ್ಥ್ಯ ಇದೆಯಂತೆ’.

‘ಹೇಗೋ, ರಾಜಕೀಯ ಪಕ್ಷಗಳಲ್ಲಿ ಹೀಗೆ ‘ಕೊಟ್ಟು-ತಗೊಳ್ಳೋ’ ಸೌಹಾರ್ದ ಸಂಬಂಧವಿದ್ದರೆ, ಬಹುಮತ ಸಿಗದ ಸಂದರ್ಭ ದಲ್ಲಿ ಒಬ್ಬರಿಗೊಬ್ಬರು ಒಂದಾಗಿ ಆಡಳಿತ ಮಾಡಲು ಅನುಕೂಲವಾಗುತ್ತದೆ’.

‘ಹೌದು, ರಾಜಕೀಯ ಪಕ್ಷಗಳು ಕಿತ್ತಾಟ ಬಿಟ್ಟು ಹೀಗೆ ಅನ್ಯೋನ್ಯವಾಗಿ ಇರಲಿಬಿಡು’.

‘ಆದರೆ, ಕಾಲೆಳೆಯುವ, ಕೈ ಕೊಡುವ ಒಳ ಶತ್ರುಗಳ ಬಾಧೆಯಿಂದ ಪಕ್ಷದ ನಾಯಕರು ನರಳುತ್ತಿದ್ದಾರಂತೆ. ಹೈಕಮಾಂಡ್ ಮುಂದೆ, ವೇದಿಕೆ ಮೇಲೆ ಆತ್ಮೀಯತೆ ಪ್ರದರ್ಶಿಸುವ ‘ಫೋಟೊ ಫ್ರೆಂಡ್ಸ್‌’ ಎಲ್ಲ ಪಕ್ಷಗಳಲ್ಲೂ ಹೆಚ್ಚಾಗಿದ್ದಾರಂತೆ...’ ಎಂದಳು ಸುಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT