ಹರಟೆಕಟ್ಟೇಲಿ ಗುದ್ಲಿಂಗ ಮಾತು ತೆಗೆದ: ‘ಅದೇನೋ ನೊಬೆಲ್ ಪ್ರೈಸ್ ಅಂತ ಪೇಪರ್ನಾಗ್ ಬತ್ತೈತೆ. ನಮ್ಮಪ್ಪ ನನ್ ಎಮ್ಮೆ ಕಾಯಕ್ ಕಳಿಸ್ದಿದ್ರೆ ನಾನೂ ಒಂದು ಕೈ ನೋಡ್ಕತಿದ್ದೆ’. ‘ಲೇಯ್, ಎಮ್ಮೆ ಕಾಯೋದಿರ್ಲಿ, ಎಮ್ಮೆಲ್ಯೆ ಕಾದ್ರೂ ಇದು ನಮಗೆ ಸಿಗಲ್ಲ. ನಮಗೋಸ್ಕರ ಬೇರೆಯದೇ ಆದ, ಎಡವಟ್ಟು ಸಾಧನೆ, ಸಂಶೋಧನೆಗಾಗಿ ಇಗ್ನೊಬೆಲ್ ಪ್ರಶಸ್ತಿ ಅಂತ ಇದೆ’ ಎಂದ ಪರ್ಮೇಶಿ.
‘ಅಂಗೂ ಒಂದು ಪ್ರಶಸ್ತಿ ಐತಾ?’ ಮಾಲಿಂಗ ಕಣ್ಣರಳಿಸಿದ.
‘ಹ್ಞೂಂ ಕಣ್ರೋ, ಈ ವರ್ಷನೂ ಮೊನ್ನೆ ಮೊನ್ನೆ ಇಗ್ನೊಬೆಲ್ ಪ್ರಶಸ್ತಿ ಕೊಟ್ಟಿದಾರೆ. ವೈದ್ಯ
ಕೀಯ ಕ್ಷೇತ್ರದಲ್ಲಿ, ಮನುಷ್ಯರ ಮೂಗಿನ ಎರಡೂ ಹೊಳ್ಳೆಗಳೊಳಗೆ ಸಮಾನ ಕೂದಲುಗಳಿರುತ್ತವಾ ಅನ್ನೋ ಸಂಶೋಧನೆಗೆ ಇಗ್ನೊಬೆಲ್ ಸಿಕ್ಕಿದೆ’.
‘ಅಯ್ಯೋ ಹೌದಾ? ಹೊಸರುಚಿ ವಾಸನೆ ನೋಡಿ ನೋಡಿ ಗಂಡಂದಿರ ಮೂಗಿನ ಹೊಳ್ಳೆ ಕೂದಲುಗಳೇ ಉದುರಿ ಹೋಗಿರುತ್ತವೆ ಅಂತ ನಾವೂ ಸಂಶೋಧನೆ ಮಾಡ್ಬಹುದು’.
‘ಆಮೇಲೆ ಎಲೆಕ್ಟ್ರಿಕ್ ಶಾಕ್ ಕೊಟ್ಟ ಸ್ಟ್ರಾ ಫುಡ್ ಟೇಸ್ಟ್‌ನೇ ಬದಲಿಸುತ್ತಂತೆ’.
‘ವಾಹ್! ಇದು ಹೆಂಡ್ತೀರಿಗೆ ಸಿಕ್‍ಬಿಟ್ರೆ, ಗಂಡಂದಿರಿಗೆ ಸಿಕ್ಕಿಸಿ ಎಂತ ಕಲಗಚ್ಚೂ ಟೇಸ್ಟ್‌ಫುಲ್ ಅನ್ನೋ ಹಾಗ್ ಮಾಡ್ಬಿಡ್ತಾರೆ’.
‘ಅಷ್ಟೇ ಅಲ್ಲ, ಹುಡುಗ್ರಿಗೆ ಮೇಷ್ಟ್ರು ಪಾಠ ಯಾಕ್ ಬೋರ್ ಹೊಡೆಯುತ್ತೆ ಅನ್ನೋದರ ಬಗೆಗಿನ ಸಂಶೋಧನೆಗೂ ಇಗ್ನೊಬೆಲ್ ಸಿಕ್ಕಿದೆ’.
‘ಹಾಗೆ ಬೋರ್ ಹೊಡೆದಾಗ ಹಾರ್ಸೋ ರಾಕೆಟ್ ಯಾಕೆ ಸ್ಮೂತಾಗಿ ಲ್ಯಾಂಡ್ ಆಗಲ್ಲ ಅಂತ ನಾವೂ ಕಂಡ್‌ಹಿಡೀಬಹುದು’.
‘ಒಬ್ಬ ಆಕಾಶ ನೋಡ್ತಿದ್ರೆ ಮಿಕ್ಕವರೂ ಹಾಗೇ ನೋಡ್ತಾರೆ ಅನ್ನೋದಕ್ಕೆ ಪ್ರಶಸ್ತಿ ದಕ್ಕಿದೆಯಂತೆ’.
‘ಅಯ್ಯಯ್ಯೋ! ಎಂತ ಕೆಲಸ ಆಯ್ತು? ಇದ
ಕ್ಕಂತೂ ನಮಗೇ ಪ್ರಶಸ್ತಿ ಬರ್ಬೇಕಿತ್ತು. ಕಾರಣ ಹುಡುಕ್ದೆ ನಾವೂ ಆಕಾಶ ನೋಡ್ತಾ ನಿಂತ್ಕೊಂಡು ಮಿಸ್ಸಾಯ್ತು’ ಎಂದು ಹಲುಬಿದ ಕಲ್ಲೇಶಿ.
‘ಇದೊಂದೇ ಅಲ್ಲಲೇ, ತೆನೆ, ಕಮಲದ ಮೈತ್ರಿಗೆ ಕೆಮಿಸ್ಟ್ರೀಲಿ, ಎಣ್ಣೆ ಮೇಲೇ ನಿಂತಿರೋ ಪಂಚ ಗ್ಯಾರಂಟಿಗಳಿಗೆ ಫಿಜಿಕ್ಸ್‌ನಲ್ಲಿ, ರಕ್ತವೇ ಇಲ್ಲದ ಆಪರೇಶನ್‌ಗೆ ಮೆಡಿಸಿನ್‌ನಲ್ಲಿ ನಮ್ಗೆ ಇವತ್ತಲ್ಲ ನಾಳೆ ಇಗ್ನೊಬೆಲ್ ಬಂದೇ ಬರುತ್ತೆ’ ಎಂದ ಪರ್ಮೇಶಿ. ಎಲ್ಲಾ ಗೊಳ್ಳೆಂದು ನಕ್ಕರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.