ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ನಿಂಬೆ ಮಹಾತ್ಮೆ!

Last Updated 5 ಮೇ 2022, 19:31 IST
ಅಕ್ಷರ ಗಾತ್ರ

‘ಹಲೋ.. ಕೆಇಬಿನಾ? ಕರೆಂಟ್ ಯಾವಾಗ ಬರುತ್ತೆ?’

‘ಗೊತ್ತಿಲ್ಲ, ಲೈನ್ ರಿಪೇರಿ ಇದೆ. ಯಾರು ಮಾತಾಡೋದು?’

‘ನಾನು ಲೆಮೆನ್ ಮರ್ಚೆಂಟ್ ತೆಪರೇಸಿ ಅಂತ. ಅಲ್ರೀ ತೆಗೆಯೋದು ಗೊತ್ತಾಗುತ್ತೆ, ಕೊಡೋದು ಗೊತ್ತಾಗಲ್ವಾ? ಯಾವಾಗ ನೋಡಿದ್ರು ಕರೆಂಟಿರಲ್ಲ, ಬಿಲ್ ಮಾತ್ರ ಯದ್ವಾತದ್ವಾ ಬಂದಿರುತ್ತೆ...’

‘ಜುಜುಬಿ ನಿಂಬೆಹಣ್ಣು ಮಾರೋನು ನೀನು, ಎಷ್ಟ್ ಮಾತಾಡ್ತೀಯ, ತಡ್ಕೋ ಬರುತ್ತೆ...’

‘ರೀ ಸ್ವಾಮಿ, ಜುಜುಬಿ ಗಿಜುಬಿ ಅಂದ್ರೆ ಅಷ್ಟೆ, ಈಗ ನಿಂಬೆಹಣ್ಣಿನ ರೇಟು ಕೇಳಿದೀರಾ?’

‘ಹೋಗ್ಲಿ ಎಷ್ಟಪ್ಪ ಕೇಜಿಗೆ?’

‘ಕೇಜಿ ಗೀಜಿ ಇಲ್ಲ, ಒಂದಕ್ಕೆ ಇಪ್ಪತ್ತು, ಮೂರಕ್ಕೆ ಐವತ್ತು...’

‘ನಮಗಾದ್ರೆ ಎಷ್ಟಕ್ಕೆ ಕೊಡ್ತೀಯ?’

‘ನಿಮಗಾದ್ರೆ ಐವತ್ತಕ್ಕೆ ಒಂದು’

‘ಅರೆ, ಯಾಕಪ್ಪಾ?’

‘ಅದು ಹಂಗೇ... ನಿಮಗೆ ಐವತ್ತಕ್ಕೊಂದು, ಪಾನಕ, ಚಿತ್ರಾನ್ನ ಮಾಡೋರಿಗೆ ಇಪ್ಪತ್ತಕ್ಕೆ ಮೂರು, ಗಾಡಿ ಪೂಜೆ ಮಾಡೋರಿಗೆ ಇಪ್ಪತ್ತಕ್ಕೆ ಎರಡು, ರಾಜಕಾರಣಿಗಳ ಕೈಗೆ ಕೊಡೋಕಾದ್ರೆ ನೂರಕ್ಕೆ ಮೂರು, ಮಾಟ ಮಂತ್ರ ಮಾಡೋರಿಗೆ ಕೊಡೋದೇ ಇಲ್ಲ...’

‘ಇದೇನಯ್ಯ ಅನ್ಯಾಯ? ಅದೇ ನಿಂಬೆಹಣ್ಣು, ರೇಟು ಮಾತ್ರ ಬೇರೆಬೇರೆ?’

‘ಮತ್ತೆ ನೀವು ಕರೆಂಟ್‌ನೋರು ಮಾಡೋದೇನು? ಒಂದೇ ಕರೆಂಟು, ಮನೆಗೆ ಒಂದು ರೇಟು, ಅಂಗಡಿಗೆ ಒಂದು ರೇಟು, ಕೈಗಾರಿಕೆಗೆ ಇನ್ನೊಂದು ರೇಟು... ಹಂಗೆ ನಾವೂನು...’ ತೆಪರೇಸಿ ತಿರುಗೇಟು ಕೊಟ್ಟ.

‘ನಾವು ಚಿತ್ರಾನ್ನಕ್ಕೆ ಅಂತ ತಗೊಂಡ್ ಹೋಗಿ ರಾಜಕಾರಣಿಗಳ ಕೈಗೆ ಕೊಟ್ರೆ?’

‘ಅದೆಲ್ಲ ನಡೆಯಲ್ಲ, ಬ್ಲೂ ಟೂತ್ ತರ ನಾವೂ ನಿಂಬೆಹಣ್ಣಲ್ಲಿ ಗ್ರೀನ್ ಟೂತ್ ಇಟ್ಟಿರ್ತೀವಿ... ಚೇಂಜ್ ಮಾಡಿದ್ರೆ ಶಾಕ್ ಹೊಡೆಯುತ್ತೆ...’

‘ಹೌದೇನಯ್ಯ, ನಿಜಾನಾ?’
‘ಅಯ್ಯೋ ಯಾವ ಟೂತೂ ಇಲ್ಲ, ಈಗೇನು ಕರೆಂಟ್ ಕೊಡ್ತೀರೋ ಅಥ್ವ ನಿಮ್ ಮೇಲೆ ನಿಂಬೆಹಣ್ಣಿನ ಮಾಟ ಮಾಡಿಸ್ಲೋ?’

ಫೋನ್ ಕಟ್ಟಾಯಿತು, ಕರೆಂಟ್ ಬಂತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT