ಭಾನುವಾರ, ಅಕ್ಟೋಬರ್ 17, 2021
23 °C

ಚುರುಮುರಿ: ನಿಜವಾದ ‘ತಲೈವಿ’

ಸುಮಂಗಲಾ Updated:

ಅಕ್ಷರ ಗಾತ್ರ : | |

Prajavani

‘ಲಖನೌಗೆ ಹೋಕ್ಕೀನಿ, ಟಿಕೀಟ್ ತೆಗೆಸಿಕೊಡು’ ಎಂದು ಬೆಕ್ಕಣ್ಣ ದುಂಬಾಲು ಬಿದ್ದಿತ್ತು. ‘ಎದಕ್ಕೆ ಹೋಕ್ಕೀಯಲೇ’ ಎಂದರೆ ಬಾಯಿ ಬಿಡಲಿಲ್ಲ. ಆಮೇಲೆ ಮೆತ್ತಗೆ ‘ನೋಡಿಲ್ಲಿ’ ಎಂದು ಸುದ್ದಿಯೊಂದಿಗೆ ವಿಡಿಯೊ ಕ್ಲಿಪಿಂಗ್ ಅನ್ನೂ ತೋರಿಸಿತು.

‘ಕಂಗನಾಗೆ ಯೋಗಿಮಾಮಾ ಬೆಳ್ಳಿನಾಣ್ಯ ಉಡುಗೊರೆ ಕೊಟ್ಟಾನ. ನಾನೂ ಭೆಟ್ಟಿಯಾಗಿ, ನಾಣ್ಯ ಇಸಗೋತೀನಿ’ ಎಂದಿತು.

ನನಗೆ ನಗು ತಡೆಯಲಾಗಲಿಲ್ಲ. ‘ಮಂಗ್ಯಾನಂಥವ್ನೆ... ಅವರೇನು ಸುಮ್‌ಸುಮ್ನೆ ಎಲ್ಲಾರಿಗೂ ಕೊಡತಾರೇನು? ಆಕಿ ಸ್ಟಾರ್ ನಟಿ ಅದಾಳ, ಉತ್ತರಪ್ರದೇಶಕ್ಕೆ ರಾಯಭಾರಿ, ಅಂದ್ರ ಬ್ರಾಂಡ್ ಅಂಬಾಸಡರ್ ಆಗ್ತಾಳಂತ. ಅದಕ್ಕೆ ಕೊಟ್ಟಾರ. ನಿನ್ನಂಥೋರು ಹೋದ್ರೆ ಅವರಿಗೆ ಭೆಟ್ಟಿಯಗಾಕೂ ಟೈಮಿರಂಗಿಲ್ಲ’ ಎಂದೆ.

‘ಆಕಿ ತಲೈವಿ ಸಿನಿಮಾಗೆ ಆರು ತಿಂಗಳಿನಾಗೆ ಇಪ್ಪತ್ತು ಕೆಜಿ ತೂಕ ಹೆಚ್ಚಿಸಿಕ್ಯಂಡು, ಮತ್ತೆ ಆರೇ ತಿಂಗಳಿನಾಗೆ ಇಪ್ಪತ್ತು ಕೆಜಿ ಇಳಿಸಿ ಬಳಕೂಬಳ್ಳಿ ಆಗ್ಯಾಳಂತ. ಮಹಾರಾಜಾ, ನಿಮ್ಮದೇ ರಾಜ್ಯಭಾರ ಮುಂದುವರೆದರೆ ಎಷ್ಟ ಛಂದ ಅಂತ ಯೋಗಿಮಾಮಾನ ವರ್ಣನಾ ಮಾಡ್ಯಾಳ. ಕಂಗನಾ ಭಯಂಕರ ಶಾಣೇ ಅದಾಳ’ ಎಂದು ಗುಣಗಾನ ಮಾಡಿತು.

‘ಹ್ಞೂಂ ಮತ್ತ... ಜಯಲಲಿತಾನ ಪಾತ್ರ ಮಾಡಿದ ಮ್ಯಾಗೆ ಒಂದೀಟು ರಾಜಕೀಯ ಮಾಡದಿದ್ದರೆ ಹೆಂಗ? ಉತ್ತರಪ್ರದೇಶದ ಚುನಾವಣೆ ಬರೂದೈತಿ... ಎಲ್ಲ ವಿರೋಧ ಪಕ್ಷಗಳವರೂ ಚುನಾವಣೆ ಬಂದಾಗಷ್ಟೇ ಮೈಕೊಡವಿ ಏಳ್ತಾರ, ಇಲ್ಲಕ್ಕಂದ್ರ ಅವರದೇ ಒಳಜಗಳದಾಗೆ ಮುಳುಗಿರ್ತಾರ. ಯೋಗಿಮಾಮಾನೇ ಮತ್ತೆ ಸಿಎಂ ಆಗತಾನಂತ ಆಕಿಗಿ ಗೊತ್ತೈತಿ. ಅದಕ್ಕೇ ಈಗಿಂದಲೇ ಪುಂಗಿ ಊದತಾಳ’ ಎಂದೆ.

‘ಹಂತಾವೆಲ್ಲ ಚೀಪ್ ಪದ ಬಳಸಬ್ಯಾಡ. ಆಕಿ ಪೊಲಿಟಿಕಲಿ ಕರೆಕ್ಟ್ ಅದಾಳ, ಗಾಳಿ ಬೀಸಿದ ಕಡಿಗಿ ತೂರುವ ಶಾಣೇತನ ತೋರತಾಳ ಅನ್ನಬೇಕು’ ಎಂದು ನನ್ನ ಭಾಷೆಯನ್ನು ತಿದ್ದುತ್ತಿದ್ದ ಬೆಕ್ಕಣ್ಣ, ಬಂಗಾಳದ ಉಪಚುನಾವಣೆಯಲ್ಲಿ ದೀದಿ ಗೆದ್ದ ಸುದ್ದಿ ನೋಡಿದ್ದೇ ‘ಖೇಲಾ ಹೋಬೆ ಅಂದವ್ರಿಗೆ ಮತದಾರರು ಸರಿಯಾದ ಉತ್ತರ ಕೊಟ್ಟಾರ, ಖರೇ ಅಂದ್ರ ಈಗ ಮಮತಕ್ಕನೇ ತಲೈವಿ’ ಎಂದು ಕೇಕೆ ಹಾಕಿತು!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು