ಸೋಮವಾರ, ಜನವರಿ 24, 2022
20 °C

ಚುರುಮುರಿ | ಇದೂ ಹಂಗೇನೇ...

ಬಿ.ಎನ್. ಮಲ್ಲೇಶ್ Updated:

ಅಕ್ಷರ ಗಾತ್ರ : | |

‘ಸಾ... ದಾವಣಗೆರೇಲಿ ಇಸ್ವ ಕನ್ನಡ ಸಾಹಿತ್ಯ ಸಮ್ಮೇಳನ ಮಾಡ್ತಾರಂತೆ. ಕವಿಗೋಷ್ಠಿ ಅಧ್ಯಕ್ಷತೆಗೆ ನನ್ ಹೆಸರು ರೆಕ್ಮಂಡ್ ಮಾಡಿ ಸಾ...’ ಅಗ್ರ ಉಗ್ರ ಕವಿ ತೆಪರೇಸಿ ಎಮ್ಮೆಲ್ಲೆ ಸಣ್ಣೀರಪ್ಪನ ಹತ್ತಿರ ಬೇಡಿಕೆ ಸಲ್ಲಿಸಿದ.

‘ಲೇಯ್... ಅದು ಪರಿಷತ್ ಅಧ್ಯಕ್ಷರು, ದೊಡ್ಡ ದೊಡ್ಡ ಸಾಯಿತಿಗಳು ಮಾಡೋದು, ನಾವಲ್ಲ...’ ಎಮ್ಮೆಲ್ಲೆ ಅಡ್ಡಡ್ಡ ತಲೆಯಾಡಿಸಿದರು.

‘ಪರಿಷತ್ ಅಧ್ಯಕ್ಷರು ಆಯ್ಕೆ ಮಾಡ್ತಾರೆ ಅಂದ್ರೆ ಹೆಂಗೆ ಸಾ? ಅವರನ್ನ ಆಯ್ಕೆ ಮಾಡಿದ್ದು ನಾವಲ್ವ? ನಮ್ ಪಕ್ಷ ಅಲ್ವ? ನಿಮ್ ಮಾತು ಹೆಂಗೆ ತೆಗೆದುಹಾಕ್ತಾರೆ?’

‘ಅದೂ ಹಂಗಲ್ಲ ಕಣಲೆ, ನಾವೇಳಿದ್ರೆ ಇಲ್ಲ ಅನ್ನಲ್ಲ ಅನ್ನು... ಆದ್ರೆ ಇಸ್ವ ಸಮ್ಮೇಳನದ ಕವಿಗೋಷ್ಠಿಗೆ ನಿನ್ನೆಂಗೆ ಮಾಡೋದು ಅಂತ...’

‘ನನ್ನೆಂಗೆ ಅಂದ್ರೆ? ನಾನೂ ಕವನ ಬರೆದಿದೀನಿ ಸಾ, ಏಳೆಂಟು ಪುಸ್ತಕ ಪ್ರಿಂಟ್ ಮಾಡ್ಸಿ ಪುಗ್ಸಟ್ಟೆ ಹಂಚಿದೀನಿ, ತುಂಡು ಕಾವ್ಯದಿಂದ ಹಿಡ್ದು ಅಖಂಡ ಕಾವ್ಯನೆಲ್ಲ ಬರೆದು ಬಿಸಾಕಿದೀನಿ, ಗೊತ್ತಿಲ್ವ?’

‘ಆಯ್ತಪ್ಪ, ಅದೇನ್ ಬರೆದು ಗುಡ್ಡೆ ಹಾಕಿದೀಯ ಒಂದೆಲ್ಡು ಹೇಳು ನೋಡಾಣ...’ ಎಮ್ಮೆಲ್ಲೆ ಸವಾಲು ಹಾಕಿದರು.

ತೆಪರೇಸಿ ಶುರು ಮಾಡಿದ ‘ಇಕ್ರಲಾ ಒದರ‍್ಲಾ...’
‘ಲೇ, ತಡಿಯೋ ಇದು ನಮ್ಮ ದಲಿತ ಕವಿ ಸಿದ್ಲಿಂಗಯ್ಯ ಅವರದಲ್ವೇನೋ?’

‘ಸರಿ, ಬ್ಯಾಡ ಬುಡಿ, ಇದ್ನ ಕೇಳಿ... ಓ ನನ್ನ ಚೇತನಾ... ಆಗು ನೀ ಅನಿಚೇತನಾ...’

‘ಲೇಯ್ ಇದು ನಮ್ಮ ಕುಯೆಂಪು ಅವರದಲ್ಲೇನೋ?’

‘ನೀವೊಳ್ಳೆ ಸುಮ್ಕಿರಿ ಸಾ, ಎಲ್ಲರ ಕವನ ತಗಂಡೇ ನಾವು ಸಾಯಿತಿಗಳಾಗೋದು. ಈಗ ಎಲ್ಲ ಪಕ್ಷದ ಎಮ್ಮೆಲ್ಲೆಗಳನ್ನ ತಗಂಡು ನೀವು ಸರ್ಕಾರ ನಡೆಸ್ತಿಲ್ವಾ? ಹಂಗೇ ಇದೂನು...’

ತೆಪರೇಸಿ ವಾದಕ್ಕೆ ಎಮ್ಮೆಲ್ಲೆ ಪಿಟಿಕ್ಕೆನ್ನಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.