ಬ್ರೇಕ್‍ಫಾಸ್ಟ್ ಮೀಟಿಂಗ್ ಮುಗಿಸಿ ಹೊರಗೆ ಬಂದೆ. ‘ಹೇಗಿತ್ತು ಸಾರ್?’ ಎಂದು ಕೇಳಿದರು ಪತ್ರಕರ್ತರು.
‘ಮೀಟಿಂಗೋ ಬ್ರೇಕ್‍ಫಾಸ್ಟೋ?’
‘ಮೀಟಿಂಗ್‍ಗಳು ಇದ್ದೇ ಇರುತ್ತವೆ, ಬ್ರೇಕ್‍ಫಾಸ್ಟ್ ಬಗ್ಗೆ ಹೇಳಿ’.
‘ಚೆನ್ನಾಗಿತ್ತು ಎಂದು ಹೇಳಲಿಕ್ಕೆ ನಾನು ಇಷ್ಟಪಡುತ್ತೇನೆ’.
‘ಮೆನು?’
‘ಇಡ್ಲಿ, ವಡೆ, ಪೊಂಗಲ್, ದೋಸೆ...’
‘ಮಸಾಲೇನೋ ಪ್ಲೇನೋ...’
‘ಮಸಾಲೇಲಿ ಎಣ್ಣೆ ಜಾಸ್ತಿ ಇರುತ್ತೆ ಅಂತ ಸೆಟ್‍ದೋಸೆ ತಿಂದೆ. ನಮ್ಮ ಆರೋಗ್ಯಾನೂ ಮುಖ್ಯ ಅಲ್ಲವೆ? ಇಡ್ಲಿ ಸಾಫ್ಟಾಗಿತ್ತು. ಈಗ ಮಲ್ಲಿಗೆ ಇಡ್ಲಿ ಸಿಗೊಲ್ಲಾಂತ ಕಾಣುತ್ತೆ. ಆದರೂ ಇವತ್ತು ಕೊಟ್ಟಿದ್ದು ಚೆನ್ನಾಗಿತ್ತು’.
‘ಚಟ್ನಿ, ಸಾಂಬಾರ್...’
‘ಎರಡೂ ಇದ್ದವು. ಒಳ್ಳೇ ಹಸಿ ಕೊಬ್ಬರಿ ಚಟ್ನೀರಿ. ವೆರಿ ಟೇಸ್ಟಿ. ಸಾಂಬಾರೂ ಅಷ್ಟೆ. ಈರುಳ್ಳಿ ಬೆಲೆ ಹೆಚ್ಚಿದ್ದರೂ ಧಾರಾಳವಾಗಿ ಬಳಸಿದ್ದರು’.
‘ಮತ್ತೆ ವಡೆ?’
‘ಸಾಮಾನ್ಯವಾಗಿ ದೊಡ್ಡ ತೂತಿರೋ ಚಿಕ್ಕ ವಡೆ ಸರ್ವ್ ಮಾಡ್ತಾರೆ. ಆದರೆ ಇಲ್ಲಿ ಚಿಕ್ಕ ತೂತಿರೊ ದೊಡ್ಡ ವಡೇನೆ ಕೊಟ್ಟಿದ್ದರು’.
‘ಪೊಂಗಲ್?’
‘ತುಂಬಾ ಟೇಸ್ಟಿ. ನಾನು 2-3 ಸಲ ಹಾಕಿಸಿಕೊಂಡೆ’.
‘ಸ್ವೀಟ್ ಇರಲಿಲ್ಲವೆ?’
‘ಕ್ಯಾರೆಟ್ ಹಲ್ವ ಇತ್ತು, ಆದರೆ ನನಗೆ ಶುಗರ್. ಸ್ಕಿಪ್ ಮಾಡಿದೆ’.
‘ಏನು ಡಿಸ್ಕಸ್ ಮಾಡಿದಿರಿ?’
‘ಅದಕ್ಕೆ ಟೈಮೇ ಇರಲಿಲ್ಲ ನೋಡಿ. 10.30 ಆಗಿದ್ರಿಂದ ಹಸಿವೆ ಆಗಿತ್ತು, ಅದಕ್ಕೆ ಬ್ರೇಕ್‍ಫಾಸ್ಟ್ ಮೇಲೆ ಮಾತ್ರ ಗಮನ ಕೊಟ್ಟಿದ್ದಾಯ್ತು. 11.30ಕ್ಕೆ ನನಗೆ ಇನ್ನೊಂದು ಮೀಟಿಂಗ್ ಇತ್ತು. ಮುಂದಿನ ಸಲ ಬರ, ಕಾವೇರಿ, ಗ್ಯಾರಂಟಿ ಬಗ್ಗೆ ಚರ್ಚಿಸ್ತೀವಿ’.
‘ಬ್ರೇಕ್‍ಫಾಸ್ಟ್ ಸಕ್ಸಸ್?’
‘ಖಂಡಿತ. ಅಂದಹಾಗೆ ಬರ್ತಾ ಆ ಕೆಟರಿಂಗ್‍ನವರ ವಿಸಿಟಿಂಗ್ ಕಾರ್ಡ್ ತಂದೆ. ಮಗಳ ಮದುವೆಗೆ ಉಪಯೋಗಕ್ಕೆ ಬರುತ್ತೆ ನೋಡಿ. ಅವರಿಗೇ ಕಾಂಟ್ರಾಕ್ಟ್’.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.