ಮಂಗಳವಾರ, ಸೆಪ್ಟೆಂಬರ್ 28, 2021
22 °C

ಚುರುಮುರಿ: ಭಾಷಾ ಗಣತಿ

ಆನಂದ Updated:

ಅಕ್ಷರ ಗಾತ್ರ : | |

‘ಜಾತಿ ಗಣತಿ ಆಗಲಿಲ್ಲ’ ಹೆಂಡತಿ ಅಂದಳು. ‘ಆಗಿದೆ ವರದಿ ಹೊರಬಿದ್ದಿಲ್ಲ’ ಎಂದೆ. ‘ಆದರೆ ಇಲ್ಲಿ ನೋಡಿ ಭಾಷೆ ಗಣತಿ ಆಗಿದೆ’ ಎಂದು ಒಂದು ಬ್ರೇಕಿಂಗ್ ನ್ಯೂಸ್ ಕೊಟ್ಟಳು.

‘ಭಾಷೆ ಗಣತಿ? ಯಾವ ಸ್ವಾಮೀಜಿಗಳಾಗಲೀ ಜಗದ್ಗುರುಗಳಾಗಲೀ ಡಿಮ್ಯಾಂಡ್ ಮಾಡಿದಂತಿಲ್ಲವಲ್ಲ’ ಎಂದೆ ತುಸು ಗೊಂದಲಕ್ಕೊಳಗಾಗಿ.

‘ನಿಜ, ಆದರೆ ಕೆಲವು ಸಂಶೋಧಕರು 2011ರ ಜನಗಣತಿ ಅಂಕಿ ಅಂಶಗಳ ಆಧಾರದ ಮೇಲೆ ಭಾಷಾ ಗಣತಿ ಮಾಡಿ, ಯಾವ ಯಾವ ನಗರದಲ್ಲಿ ಯಾವ ಯಾವ ಭಾಷೆ ಮಾತನಾಡುವವರು ಎಷ್ಟೆಷ್ಟು ಮಂದಿ ಇದ್ದಾರೆ ಎಂದು ಲೆಕ್ಕ ಹಾಕಿದ್ದಾರೆ. ಅದರ ಪ್ರಕಾರ, ಕೆಂಪೇಗೌಡ ಅಂದು ನಿರ್ಮಿಸಿದ ಇಂದಿನ ಬೆಂಗಳೂರಿನಲ್ಲಿ ಒಟ್ಟು 107 ಭಾಷೆಗಳು ಚಾಲ್ತಿಯಲ್ಲಿವೆ ಎಂದು ಕಂಡುಬಂದಿದೆ’ ಎಂದಳು.

‘ಕನ್ನಡಾನೂ ಇದೆ ತಾನೆ?’ ಎಂದು ಕೇಳಿದೆ.

‘ಇದೇರಿ, ಶೇ 45ರಷ್ಟು ಜನ ಬರೀ ಕನ್ನಡ ವನ್ನೇ ಮಾತನಾಡುತ್ತಾರಂತೆ ಬೆಂಗಳೂರಿನಲ್ಲಿ’.

‘ಅದು ಉತ್ಪ್ರೇಕ್ಷೆ ಅಂತ ಅನಿಸುವುದಿಲ್ಲವೆ ನಿನಗೆ?’ ಎಂದು ಕೇಳಿದೆ.‌ ‘ಯಾಕ್ರೀ?’ ಎಂದಳು.

‘ರಸೆಲ್ ಮಾರ್ಕೆಟ್‍ನಲ್ಲಿ ಕತ್ರಿಕಾಯಿ ಪತ್ತು ರೂಪಾಯಿ ಎಂದು ಕೂಗುವುದು ಕೇಳಿಲ್ಲವೆ? ಕನ್ನಡ ಟೀವಿ ಅಡುಗೆ ಕಾರ್ಯಕ್ರಮದಲ್ಲಿ ಒಂದು ಸ್ಪೂನ್ ಸಾಲ್ಟ್, ನಾಲ್ಕು ಸ್ಮಾಲ್ ಪೀಸ್ ಆನಿಯನ್, ಸ್ವಲ್ಪ ಕೊರಿಯಾಂಡರ್ ಲೀವ್ಸ್ ಹಾಕಿ ಗಾರ್ನಿಷ್ ಮಾಡಿ ಎಂದೆಲ್ಲಾ ಪ್ಯೂರ್ ಕನ್ನಡದಲ್ಲೇ ಮಾತನಾಡ್ತಾರೆ. ಮೊನ್ನೆ ಕೈಗಾಡೀಲಿ ಕೊತ್ತಂಬರಿ ಸೊಪ್ಪು 1 kat 10 ರುಪೀಸ್ ಎಂಬ ದ್ವಿಭಾಷಾ ಬೋರ್ಡ್ ನೋಡಿದೆ’ ಎಂದೆ.

‘ನೀವು ಸಿನಿಕಲ್’ ಎಂದಳು.

‘ಅಂದಹಾಗೆ ಜನ ಗಣತಿ ಯಾವ ವರ್ಷದ್ದು?’

‘2011ರದ್ದು’ ಎಂದಳು. ‘ಹತ್ತು ವರ್ಷ ಹಳೆಯದು. ಆಗಲೇ ಶೇ 45ರಷ್ಟು ಇದ್ದಿದ್ದರೆ ಈಗ ಅದು ಖಂಡಿತ ಇನ್ನೂ ಕೆಳಗೆ ಇಳಿದಿರುತ್ತದೆ. ಕನ್ನಡಿಗರ ಸಂಖ್ಯೆ ಸತತವಾಗಿ ಹೆಚ್ಚಲು ಅದೇನು ಪೆಟ್ರೋಲ್ ಬೆಲೆಯೇ? ಎಂದೆ.

‘ಹಾಗಾದರೆ ಈಗ ಎಷ್ಟಿರಬಹುದು?’

‘ಈಗೊಂದು ಭಾಷಾ ಗಣತಿ ಮಾಡಿದರೆ ಬೆಂಗಳೂರಿನಲ್ಲಿ ಎಷ್ಟು ಮಂದಿ ಕನ್ನಡ ಮಾತ ನಾಡುವವರು ಇದ್ದಾರೆ ಎಂದು ತಿಳಿಯಬಹುದು’ ಎಂದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.