ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಒಳ್ಳೆಯ ಸುದ್ದಿ!

Last Updated 22 ಡಿಸೆಂಬರ್ 2022, 22:30 IST
ಅಕ್ಷರ ಗಾತ್ರ

‘ರೀ ತೆಪರೇಸಿ, ದಿನ ಬೆಳಗಾದ್ರೆ ನಮ್ ಚಾನೆಲ್‌ನಲ್ಲಿ ಬರೀ ತೆಲಿ ಕೆಟ್ ಸುದ್ದಿ ಹಾಕಿ ಹಾಕಿ ಸಾಕಾಗಿದೆ, ಇವತ್ತು ಬರೀ ಒಳ್ಳೆ ಸುದ್ದಿ ಹಾಕೋಣ, ಹೋಗಿ ತಗಂಡ್ ಬನ್ನಿ...’ ಸಂಪಾದಕರು ಆದೇಶಿಸಿದರು. ತೆಪರೇಸಿ ಒಳ್ಳೆ ಸುದ್ದಿ ಹುಡುಕಿಕೊಂಡು ಹೊರಟ.

ಮೊದಲಿಗೆ ಸಿಕ್ಕ ಬೆಳಗಾವಿ ಗಡಿ ಹೋರಾಟಗಾರರು ‘ನಾವು ಗಡಿ ಹೋರಾಟ ಕೈಬಿಟ್ಟಿದ್ದೇವೆ, ನಮ್ಮ ನಿಮ್ಮ ಎಲ್ಲಾ ಊರುಗಳೂ ಭಾರತ ದೇಶಕ್ಕೆ ಸೇರಿವೆ’ ಎಂದರು.

ಇದಪ್ಪಾ ಒಳ್ಳೆ ಸುದ್ದಿ ಎಂದು ಖುಷಿಪಟ್ಟ ತೆಪರೇಸಿಗೆ ಮುಂದೆ ಡಿಕೆಶಿ ಸಾಹೇಬರು ಎದುರಾದರು. ‘ಸರ್, ಸಿಬಿಐ ದಾಳಿ...’ ಎನ್ನುತ್ತಿದ್ದಂತೆ ತಡೆದ ಡಿಕೆಶಿ ‘ತನಿಖೆ ಆದಮೇಲೆ ನಮ್ಮನೇಲೇ ಸಿಬಿಐ ಅಧಿಕಾರಿಗಳಿಗೆ ಊಟದ ವ್ಯವಸ್ಥೆ ಮಾಡಿದೀನಿ’ ಎಂದರು. ತೆಪರೇಸಿ ಕಕ್ಕಾಬಿಕ್ಕಿಯಾದ.

ಮುಂದೆ ಸಿದ್ದರಾಮಯ್ಯ ಸಿಕ್ಕರು. ‘ಸಾವರ್ಕರ್ ಅಲ್ಲ, ಅಸೆಂಬ್ಲೀಲಿ ಯಾರ ಫೋಟೊ ಹಾಕಿದ್ರೂ ನಮ್ಮ ಅಭ್ಯಂತರ ಇಲ್ಲ’ ಎಂದರು. ಜೊತೆಯಲ್ಲೇ ಇದ್ದ ಈಶ್ವರಪ್ಪ ‘ನಂಗೆ ಮಂತ್ರಿ ಸ್ಥಾನ ಬೇಕಿಲ್ಲ ಅಂತ ನಿಮ್ ಟೀವೀಲಿ ಹಾಕ್ರಿ’ ಎಂದರು. ತೆಪರೇಸಿಗೆ ಆಶ್ಚರ್ಯ!

ನಂತರ ಖರ್ಗೆ ಸಾಹೇಬರಿಗೆ ಫೋನ್ ಮಾಡಿದ ತೆಪರೇಸಿ ‘ಸರ್ ಎಲ್ಲಿದೀರಾ?’ ಎಂದ. ‘ನಾನು ಮೋದಿ ಸಾಹೇಬ್ರಿಗೆ ನಮ್ ಕಡೀದು ಜೋಳದ ರೊಟ್ಟಿ, ಪುಂಡಿಪಲ್ಯ ಊಟ ಬಡಿಸ್ತಿದೀನಿ’ ಎಂದರು ಖರ್ಗೆ. ವಾಹ್ ಇದಕ್ಕಿಂತ ಒಳ್ಳೆ ಸುದ್ದಿ ಬೇಕಾ ಎಂದುಕೊಂಡ ತೆಪರೇಸಿ ಆ ಎಲ್ಲ ಸುದ್ದಿಗಳನ್ನ ಪಟ್ ಅಂತ ಸಂಪಾದಕರಿಗೆ ರವಾನಿಸಿದ. ‘ವೆರಿಗುಡ್, ನಿಮ್ಮ ಸಂಬಳ ಡಬಲ್ ಮಾಡಿದೀನಿ ಕಣಯ್ಯ ತೆಪರೇಸಿ’ ಎಂದರು ಸಂಪಾದಕರು.

ಖುಷಿಯಿಂದ ‘ವಾವ್ಹಾ...’ ಎಂದುಕಿರುಚಿದ ತೆಪರೇಸಿ ಮುಖದ ಮೇಲೆ ಯಾರೋ ತಣ್ಣೀರು ಎರಚಿದಂತಾಯಿತು. ಕಣ್ಣು ಬಿಟ್ಟರೆ ಎದುರಿಗೆ ಹೆಂಡತಿ ಪಮ್ಮಿ! ‘ಏನಾಗೇತ್ರಿ ನಿಮ್ಗೆ? ಯಾಕಂಗ್ ಕಿರುಚ್ತಿದೀರಾ?’ ಎಂದಳು.

ಓ... ಇದೆಲ್ಲ ಕನಸಾ ಎನ್ನುತ್ತ ಮುಖದಮೇಲಿನ ನೀರು ಒರೆಸಿಕೊಂಡು ಎದ್ದು ಕೂತ ತೆಪರೇಸಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT