ಮಂಗಳವಾರ, ಮಾರ್ಚ್ 28, 2023
33 °C

ಚುರುಮುರಿ | ಕಾಗೆ ಹಾರಿಸೋರು

ಲಿಂಗರಾಜು ಡಿ.ಎಸ್. Updated:

ಅಕ್ಷರ ಗಾತ್ರ : | |

Prajavani

‘ಅಸೆಂಬ್ಲಿ ಸುರುವಾತಲ್ಲ ಸೀಎಂ ನಾಕು ದಿನದಿಂದ ಅಂತ ಕಣ್ಣಗೆ ನೀರಾಕ್ಕತಾವ್ರಂತೆ. ನೀವು ರಾಜೀನಾಮೆ ಮಾತ್ರ ಕೊಡಕ್ಕೇ ಕೂಡ್ದು, ನಮ್ಮ ಜೊತೆ ಗಟ್ಟಿಯಾಗಿ ನಿಂತ್ಕಬಕು ಅಂತ ಜುಲುಮೆ ಮಾಡ್ತಾವ್ರಂತೆ’ ಅಂತು ಯಂಟಪ್ಪಣ್ಣ.

‘ಕಣ್ಣಗೆ ನೀರಾಕದು ಒಂದು ವಿದ್ಯೆ ಕನಣೈ’ ತುರೇಮಣೆ ಉವಾಚ.

‘ಸಾ, ಅರವತ್ತನಾಲ್ಕು ವಿದ್ಯೆಗಳು ಅಂದ್ರೇನು?’ ತುರೇಮಣೆಗೆ ಕೇಳಿದೆ.

‘ಅದ ತಗಂಡು ನೀನೇನು ಮಾಡೀಲಾ?’ ಅಂತ ಕೇಳಿದರು.

‘ಸಾ, ಶಿಲ್ಪಿ ಕೆತ್ತನೆ ಮಾಡ್ತನೆ, ಶಿಕ್ಷಕ ವಿದ್ಯೆ ಕಲಿಸ್ತನೆ, ನೌಕರ ಸೇವೆ ಮಾಡ್ತನೆ, ಕೃಷಿಕ ಬೆಳೆ ತೆಗಿತನೆ, ಕಲಾವಿದ ಅಭಿನಯಿಸ್ತನೆ, ವಕೀಲ ವಾದ ಮಾಡ್ತನೆ, ವೈದ್ಯ ಔಷಧಿ ಕೊಡ್ತನೆ. ಇದು ಅವರ ವೃತ್ತಿಧರ್ಮ. ರಾಜಕೀಯದೋರಿಗೆ ಇಂಥಾ ವೃತ್ತಿಧರ್ಮ ಇದೆಯಾ?’ ಅಂತಂದೆ.

‘ಜೀವನ ನಿರ್ವಹಣೆಗೋಸ್ಕರ ಮಾಡೋ ಕ್ಯಾಮೆಯನ್ನ ವೃತ್ತಿ ಅಂತರೆ ಕಪ್ಪಾ. ರಾಜಕೀಯವ ಜೀವನ ನಿರ್ವಹಣೆಗೆ ಅಂತ ಮಾಡಲ್ಲ, ಅದೊಂದು ಕಸುಬು ಕಯ್ಯಾ, ಅದಕ್ಕೆ ಯಾವ ಧರ್ಮವೂ ಇಲ್ಲ’ ಅಂದ್ರು.

‘ನನಗೆ ಅರ್ಥಾಗಲಿಲ್ಲ ಸಾ’ ಅಂತಂದೆ.

‘ತತ್ವಗಳ ನಡುವಿನ ಕಲಹವನ್ನ ವಯಕ್ತಿಕ ಲಾಭಕ್ಕೆ ಬಳಸಿಕೊಳ್ಳೊ ಬುದ್ಧಿವಂತ ನಡವಳಿಕೆನೇ ರಾಜಕೀಯ ಕನಾ ಮಗಾ’ ಅಂದ್ರು.

‘ರಾಜಕೀಯದೇಲಿ ಶತ್ರುಗಳನ್ನ ಕ್ಷಮಿಸಬೇಕು. ಆದರೆ ಅವರ ಹೆಸರು ಮಾತ್ರ ಯಾವತ್ತಿಗೂ ಮರಿಬ್ಯಾಡ್ದು ಅನ್ನೋದು ತಿಳಿದೋನೆ ರಾಜಕಾರಣಿ’ ಅಂತು ಯಂಟಪ್ಪಣ್ಣ.

‘ಸರಿಯಾಗಿ ಬುಡಸೇಳಿ, ರಾಜಕೀಯ ಅಂದ್ರೇನು?’ ಅಂದೆ.

‘ರಾಜಕಾರಣಿ ನುಡಿಮದ್ದು ಹಾರಿಸ್ತನೆ, ದುಡ್ಡಿನ ಬೆಳೆ ತೆಗಿತನೆ, ವತ್ತರಿಂದ ಸಂದೆಗಂಟಾ ಅಭಿನಯಿಸ್ತನೆ, ತಾರಾಮಾರ ವಾದ ಮಾಡ್ತನೆ, ಸಮಸ್ಯೆಗಳಿಗೆ ತಪ್ಪು ತಪ್ಪಾಗಿ ಪರಿಹಾರ ಸೂಚಿಸ್ತನೆ, ಕಂಡ ಕಂಡೊರಿಗೆಲ್ಲಾ ಬೈತನೆ, ಪಸಂದಾಗಿ ಸುಳ್ಳೇಳ್ತಾ ಕಾಗೆ ಹಾರಿಸ್ತನೆ’ ಅಂತಂದ್ರು.

‘ಅಂದ್ರೆ ಅರವತ್ತನಾಲ್ಕು ವಿದ್ಯೆಗಳನ್ನೂ ಕರತಲಾಮಲಕ ಮಾಡಿಕ್ಯಂಡು ಅವಕಾಶವಾದಿ ರಾಜಕೀಯ ಮಾಡೋನೇ ರಾಜಕಾರಣಿ ಅಂತ್ಲೋ?’ ಅಂತಂದೆ. ಯಾರೂ ಉತ್ತರ ಕೊಡಲಿಲ್ಲ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು