ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಶಿಷ್ಯೋಪದೇಶ!

Last Updated 26 ಆಗಸ್ಟ್ 2021, 22:30 IST
ಅಕ್ಷರ ಗಾತ್ರ

ಒಂದೂವರೆ ವರ್ಷದ ನಂತರ ಪುನರಾರಂಭಗೊಂಡ ನಮ್ಮ ಹಳ್ಳಿ ಹೈಸ್ಕೂಲ್ ಸುಣ್ಣಬಣ್ಣದಿಂದ ಕಂಗೊಳಿಸುತ್ತಿತ್ತು. ಪುಷ್ಪವೃಷ್ಟಿಯ ನಂತರ ದೊರೆತ ಸಿಹಿತಿಂಡಿ ಚಪ್ಪರಿಸುತ್ತಾ ವಿದ್ಯಾರ್ಥಿಗಳು ಸಂಭ್ರಮಿಸುತ್ತಿದ್ದರು. ಮಾಸ್ಕ್ ಧರಿಸಿದ್ದ ಅವರು ಅಂತರ ಪಾಲನೆ ಮಾಡುತ್ತಾ ದೂರವಿದ್ದುದರಿಂದ ಹಾಗೂ ದೀರ್ಘಕಾಲ ಸಂಪರ್ಕ ತಪ್ಪಿದ್ದರಿಂದ, ನಿವೃತ್ತಿಯ ಅಂಚಿನಲ್ಲಿದ್ದ ಕ್ಲಾಸ್ ಮೇಷ್ಟ್ರು ಅವರ ಹೆಸರುಗಳನ್ನು ತಪ್ಪಾಗಿ ಕರೆಯುತ್ತಿದ್ದರು.

ವಿದ್ಯಾರ್ಥಿಗಳು ಮುಸಿಮುಸಿ ನಗುತ್ತಿದ್ದುದನ್ನು ಕಂಡ ಮೇಷ್ಟ್ರು ಅಸಹನೆಯಿಂದ ‘ಇವತ್ತು ಪಾಠ ಬೇಡ. ಕೊರೊನಾ ಅವಧಿಯ ನಿಮ್ಮ ಅನುಭವ ಕುರಿತು ಪ್ರಬಂಧ ಬರೆಯಿರಿ’ ಎಂದರು. ಅವರು ಸುಮ್ಮನಿದ್ದುದನ್ನು ಗಮನಿಸಿ ಕೇಳಿದರು- ‘ಬರೆಯಲು ನೋಟ್‍ಬುಕ್ ಏಕೆ ತಂದಿಲ್ಲ?’

‘ಸಾರ್, ನಾವೆಲ್ಲ ಆನ್‍ಲೈನ್ ಪಾಠ ಕೇಳಿ ಪರೀಕ್ಷೆ ಬರೆಯದೆ ಪಾಸಾದವರು. ಓದುವ ಬರೆಯುವ ಅಭ್ಯಾಸ ತಪ್ಪಿಹೋಗಿದೆ’ ಎಂದ ಸೋಮು. ‘ಈಗ ಶಾಲೆ ಆರಂಭವಾಯ್ತಲ್ಲ, ನೀವು ಪುಸ್ತಕ, ನೋಟ್‍ಬುಕ್ಸ್ ತರಬೇಕು’.

‘ನಾವು ಆನ್‍ಲೈನ್ ಕ್ಲಾಸ್‍ಗೆ ಒಗ್ಗಿಕೊಂಡಿ ದೀವಿ. ಮೊಬೈಲ್‍ನಲ್ಲೇ ಉತ್ತರ ಬರೀತೀವಿ’ ಎನ್ನುತ್ತಾ ರಾಮು ಜೇಬಿನಿಂದ ಮೊಬೈಲ್ ತೆಗೆದ. ‘ಇನ್ನೊಮ್ಮೆ ಪ್ರಶ್ನೆ ಜೋರಾಗಿ ಹೇಳಿ ಸಾರ್, ವಾಯ್ಸ್ ರೆಕಾರ್ಡ್ ಮಾಡ್ಕೊಳ್ತೀವಿ’ ಎಂದಳು ಜಾನಕಿ. ಚಿಂತಾಕ್ರಾಂತರಾದ ಮೇಷ್ಟ್ರನ್ನು ಗಮನಿಸಿದ ಸರಳ ಹೇಳಿದಳು- ‘ಸಾರ್, ನಮ್ಮ ಮೊಬೈಲ್‍ಗಳಲ್ಲಿ ಆಟೊ ಕರೆಕ್ಷನ್ ಮತ್ತು ಆಟೊ ವ್ಯಾಲ್ಯುಯೇಷನ್ ಆ್ಯಪ್ ಇದೆ, ಚಿಂತಿಸಬೇಡಿ’.

‘ಕಂಪ್ಯೂಟರ್ ಕಲಿಕೆಯನ್ನು ಸರ್ಕಾರ ಕಡ್ಡಾಯ ಮಾಡಿದೆಯಲ್ಲಾ. ನಿಮ್ಗೆ ಕಲಿಸಿಕೊಡ್ತೀವಿ, ಬನ್ನಿ’ ಎಂದ ಶ್ರೀನಿವಾಸ. ಮೊಬೈಲ್‌ನಲ್ಲಿ ವಾಟ್ಸ್‌ಆ್ಯಪ್, ಎಸ್ಸೆಮ್ಮೆಸ್, ಟ್ವಿಟರ್, ಫೇಸ್‍ಬುಕ್, ಯುಟ್ಯೂಬ್, ಇನ್‍ಸ್ಟಾಗ್ರಾಂ ಬಗ್ಗೆ ವಿದ್ಯಾರ್ಥಿಗಳಿಂದ ಮೇಷ್ಟ್ರಿಗೆ ಶಿಷ್ಯೋಪದೇಶ ಆಯಿತು!

ಮೇಷ್ಟ್ರನ್ನು ರಾಮು ಕೇಳಿದ– ‘ಈಗ ಟೆಸ್ಟ್ ಮಾಡುವ ಸರದಿ ನಮ್ಮದು- ಎಸ್ಸೆಮ್ಮೆಸ್ ಅಂದ್ರೇನು?’

ಮೇಷ್ಟ್ರು ‘ಈ ಕೊರೊನಾ, ಕಂಪ್ಯೂಟರ್, ಮೊಬೈಲ್‍ಗಳ ಕಿರುಕುಳದಿಂದ ‘ಸೇವ್ ಮೈ ಸೋಲ್’- ನನ್ನನ್ನು ಕಾಪಾಡಿ ಅಂತ’ ಎಂದಾಗ ವಿದ್ಯಾರ್ಥಿಗಳೆಲ್ಲಾ ಜೋರಾಗಿ ಚಪ್ಪಾಳೆ ತಟ್ಟಿದರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT