ಮಂಗಳವಾರ, ನವೆಂಬರ್ 24, 2020
19 °C

ಚುರುಮುರಿ | ನಮ್ಗೂ ಬೇಕು ಗಮಾಗಮ!

ಬಿ.ಎನ್.ಮಲ್ಲೇಶ್ Updated:

ಅಕ್ಷರ ಗಾತ್ರ : | |

Prajavani

ಸಂಜೆಗೆ ಮೊದಲೇ ಟೈಟಾಗಿ ಎಲ್ಲರಿಗಿಂತ ಮೊದಲು ಹರಟೆಕಟ್ಟೆಗೆ ಬಂದಿದ್ದ ತೆಪರೇಸಿ. ನಂತರ ಬಂದ ದುಬ್ಬೀರ, ಗುಡ್ಡೆ, ಕೊಟ್ರೇಶಿ, ಪರ್ಮೇಶಿಗೆಲ್ಲ ಆಶ್ಚರ್ಯ!

‘ಏನೋ ತೆಪರಾ ಇಷ್ಟ್ ಬೇಗ ಬಂದ್‍ಬಿಟ್ಟಿದೀಯ? ಆಗ್ಲೇ ಮಬ್ಬು ಕವಿದಂಗೆ ಕಾಣ್ತತಿ?’ ಎಂದ ಗುಡ್ಡೆ.

‘ಹೌದಲೆ... ಮಬ್ಬು ಕವಿದೈತಿ, ನಮ್ಗೆಲ್ಲ ಅನ್ಯಾಯ ಆಗೇತಿ, ಅದ್ಕೆ ತಗಂಡು ಪ್ರತಿಭಟಿಸ್ತಿದೀನಿ’ ತೊದಲಿದ ತೆಪರೇಸಿ.

‘ಅನ್ಯಾಯನಾ? ಏನಾಗೇತಿ? ನಮ್ಗೆಲ್ಲ ಅಂದ್ರೆ ಯಾರಿಗೆ?’ ದುಬ್ಬೀರ ಪ್ರಶ್ನಿಸಿದ.

‘ನಮ್ಗೆಲ್ಲ ಅಂದ್ರೆ ನಮ್ಗೆ... ನಮ್ ಹರಟೆಕಟ್ಟೆಗೆ. ನಮ್ಗೂ ಒಂದು ಗಮಾಗಮ ಬೇಕು’.

‘ಗಮಾಗಮನಾ? ಆಗ್ಲೇ ಗಬ್ಬು ನಾರ್ತಾ ಇದೀಯ, ಮತ್ಯಾವ ಗಮಗಮ ಬೇಕು ನಿಂಗೆ?’ ಗುಡ್ಡೆಗೆ ಸಿಟ್ಟು ಬಂತು.

‘ಲೇಯ್ ನಾನೇಳಿದ್ದು ಮುಖ್ಯಮಂತ್ರಿಗಳು ಕೇಳ್ ಕೇಳಿದೋರಿಗೆಲ್ಲ ಒಂದೊಂದ್ ಗಮಾಗಮ ಕೊಡ್ತಿದಾರಲ್ಲ, ನಮ್ ಹರಟೆಕಟ್ಟೆಗೂ ಒಂದ್ ಕೊಡ್ಲಿ ಅಂತ, ತಿಳ್ಕಾ...’ ತೆಪರೇಸಿ ನಾಲಿಗೆ ತಿರುಗಲಿಲ್ಲ.

ಗುಡ್ಡೆ ತಲೆ ಕೆರೆದುಕೊಂಡ. ಮುಖ್ಯಮಂತ್ರಿ ಕೊಡೋ ಗಮಾಗಮ... ಓ, ನಿಗಮನೇನೋ? ಥೂ ನಿನ್ನ’ ಎಂದ. ದುಬ್ಬೀರನಿಗೆ ನಗು ತಡೆ
ಯಲಾಗಲಿಲ್ಲ.

‘ಹ್ಞೂಂ ಮತ್ತೆ, ಅದೇ ನಿಗಮಾಗಮ. ನಮ್ ಹರಟೆಕಟ್ಟೆ ಅಂದ್ರೆ ಸುಮ್ನೆನಾ? ಚಾ ಕುಡಿಯಾಕೆ ರೊಕ್ಕಿಲ್ಲದಿದ್ರು ದೇಶದ ಬಗ್ಗೆ ತೆಲಿ ಕೆಡಿಸ್ಕಳೋರು ನಾವು. ನಮಗೂ ಒಂದು ಅದನ್ನ ಕೊಡ್ಲಿ, ಐವತ್ತು ಕೋಟಿ ರೊಕ್ಕ ಇಡ್ಲಿ, ಏನ್ ತಪ್ಪು?’ ತೆಪರೇಸಿ ಟ್ರ್ಯಾಕಿಗೆ ಬಂದ.

‘ಅಂದ್ರೆ, ಹರಟೆಕಟ್ಟೆ ಅಭಿವೃದ್ಧಿ ನಿಗಮ ಅಂತ ಮಾಡಬೇಕು, ಐವತ್ತು ಕೋಟಿ ರೊಕ್ಕ ಇಡಬೇಕು. ಸರಿ, ಅಧ್ಯಕ್ಷರ‍್ಯಾರು’ ದುಬ್ಬೀರ ಪ್ರಶ್ನಿಸಿದ.

‘ಇನ್ಯಾರು? ನಾನೇ ಅಧ್ಯಕ್ಷ...’ ತೆಪರೇಸಿ ಹಕ್ಕು ಮಂಡಿಸಿದ.

‘ನೀನಾ? ನೀನು ಅಧ್ಯಕ್ಷ ಆಗೋದಾದ್ರೆ ಬೇರೆ ದೊಡ್ಡ ನಿಗಮಾನೇ ಮಾಡಬೇಕು ಬಿಡು...’

‘ಯಾವುದು?’

‘ಕುಡುಕರ ಅಭಿವೃದ್ಧಿ ನಿಗಮ!’ ದುಬ್ಬೀರನ ಮಾತಿಗೆ ಎಲ್ಲರೂ ಗೊಳ್ಳಂತ ನಕ್ಕರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.