‘ಸಾ, ಕಾಂಗ್ರೆಸ್ಸು, ಬಿಜೆಪಿ ಆಪೀಸಿನ ಮ್ಯಾಲೆ ಯಾವ್ಯಾವೋ ಗುರುತಿಸಲಾಗದಂತಹ ಅನ್ ಐಡೆಂಟಿಫೈಡ್ ಪೊಲಿಟಿಕಲ್ ಆಬ್ಜೆಕ್ಟುಗಳು ಹಾರಾಡ್ತಾ ಅವಂತೆ!’ ಅಂತ ಬ್ರೇಕಿಂಗ್ ನ್ಯೂಸ್ ಹೇಳಿದೆ.
‘ಹ್ಞೂಂ ಕಯ್ಯಾ, ‘ದಳದೇಲಿ ಕುಮಾರಣ್ಣನ ಜೊತೆ ಸಂಸಾರ ಮಾಡದು ಕಷ್ಟಾಗ್ಯದೆ. ಭಾಳ ರೋಸ್ತನೆ. ನಾವು ಕುಮಾರಣ್ಣನಿಗೆ ಸೋಡಾಚೀಟಿ ಕೊಟ್ಟು ನಿಮ್ಮ ಬಡ್ಡೆಗೆ ಬತ್ತೀವಿ’ ಅಂತ 12 ಅನ್ ಐಡೆಂಟಿಫೈಡ್ ಪೊಲಿಟಿಕಲ್ ಆಬ್ಜೆಕ್ಟುಗಳು ಕಾಂಗ್ರೆಸ್ ಜೊತೆಗೆ ಕ್ಲೋಸ್ ಎನ್‍ಕೌಂಟರ್ ಆಫ್ ದಿ ಥರ್ಡ್ ಕೈಂಡ್ ಮಾಡ್ಯವಂತೆ’ ಅಂದ್ರು ತುರೇಮಣೆ.
‘ಹೌದೇಳ್ರಿ, ಮನ್ನೆ ಚೆಲುವಣ್ಣ, ಬಾಲಣ್ಣ ಹೇಳ್ತಿದ್ರಲ್ಲ!’ ಅಂದ ಚಂದ್ರು.
‘ಕುಮಾರಣ್ಣ ‘ನಾನು ಕಮಲದ ದಳವಾಗದೇ ಸೈ. ಮೋದಿ ಮಾವಾರು ಹೋದ ಸತೀಲೇ ಕರೆದು ತಲೆ ಸವರಿ, ಯಾವಾಗ ಬತ್ತೀಲಾ ಅಂತ ಕೇಳ್ಯವುರೆ ಅಂದದೆ’ ಯಂಟಪ್ಪಣ್ಣ ಬಿರುಸಾಗಿ ಹೇಳಿತು.
‘ಹೌದಂತೆ ಕನಣೈ! ‘ನೀನೇ ಇರೋಧ ಪಕ್ಸದ ನಾಯಕ, ಮುಂದ್ಲ ಮುಖ್ಯಮಂತ್ರಿ ನೀನೇಯಾ’ ಅಂತ ಮೂಗಿಗೆ ತುಪ್ಪ ಹಚ್ಚವ್ರಂತೆ’ ಅದುಕ್ಕೆ ಕುಮಾರಣ್ಣ ‘ಬ್ಯಾಡ ಕಾ ಮಾವೋ. ನಿಮ್ಮಟ್ಟೀಲೇ ಮನೆಮಗ ಇದ್ದಂಗಿರತೀನಿ. ನನ್ನನ್ನೋ ನನ್ನ ಕಂದನ್ನೋ ಸೆಂಟ್ರಲ್ ಮಿನಿಸ್ಟರ್ ಮಾಡಿಬುಡಿ’ ಅಂದದಂತೆ’ ಚಂದ್ರು ವಿಶ್ಲೇಷಿಸಿದ.
‘ಯಾವ್ಯಾವ ಪಕ್ಸದ ಪೊಲಿಟಿಕಲ್ ಆಬ್ಜೆಕ್ಟುಗಳು ಎಲ್ಲೆಲ್ಲಿ ನಿಂತುಗಂಡು ಲ್ಯಾಂಡಿಂಗಿಗೆ ಅವಕಾಶಕ್ಕೆ ಕಾಯ್ತಾ ಅವೋ ಗೊತ್ತಾಯ್ತಿಲ್ಲ. ರಾಜವುಲಿ 17 ಪೊಲಿಟಿಕಲ್ ಆಬ್ಜೆಕ್ಟುಗಳ ಹಾರಿಸಿಗ್ಯಂಡೋಗಿ ಸಿಎಂ ಆಗಿರನಿಲ್ವೇ!’ ಅಂತು ಯಂಟಪ್ಪಣ್ಣ.
‘ಈಗ ಪಕ್ಸಗಳು ಮೂರಾಬಟ್ಟೆ ಆಗಿ ಜನದ ಇತಾಪರ ಮರೆತು ಅಲಾಕಾಗೋಗ್ಯವೆ ಕನ್ರೋ. ಕೈ, ದಳ, ಕಮಲಗಳೆಲ್ಲಾ ವರ್ಗಾವಣೆಗೆ ಕಾಸು ಇಸುಗಂಡು ಗಂಟು ಮಾಡಿಕ್ಯಂದಿದ್ದೋರೇ! ಈಗ ಕಮಲದ ಬಸ್ಸಿಗೆ ಡ್ರೈವರ್ ಇಲ್ಲ, ದಳದ ವ್ಯಾನಿಗೆ ಜನವೇ ಇಲ್ಲ’ ತುರೇಮಣೆ ರಾಜಕೀಯದ ಪುಟ ಬಿಚ್ಚಿಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.