ಶನಿವಾರ, ಸೆಪ್ಟೆಂಬರ್ 25, 2021
29 °C

ಚುರುಮುರಿ: ಟ್ರಿಲಿಯನ್‍: ಎಷ್ಟು ಸೊನ್ನೆ?

ಆನಂದ Updated:

ಅಕ್ಷರ ಗಾತ್ರ : | |

Prajavani

‘ಟ್ರಿಲಿಯನ್ ಎಂದರೆ ಎಷ್ಟು?’ ಎಂದು ಹೆಂಡತಿ ಕೇಳಿದಳು. ‘ಏಕೆ?’ ಎಂದೆ.

‘ಅಫ್ಗಾನಿಸ್ತಾನದಲ್ಲಿ ಮೂಗು ತೂರಿಸಿದ್ದಕ್ಕೆ ಅಮೆರಿಕಕ್ಕೆ 2 ಟ್ರಿಲಿಯನ್ ಡಾಲರ್ ಖರ್ಚಾಗಿದೆ. ಆ ಭೂಗರ್ಭದಲ್ಲಿ 2-3 ಟ್ರಿಲಿಯನ್ ಡಾಲರ್ ಮೌಲ್ಯದಷ್ಟು ಖನಿಜ ಸಂಪತ್ತು ಹುದುಗಿದೆಯಂತೆ. ಅದೆಷ್ಟು ಹಣ?’ ಅವಳ ಪ್ರಶ್ನೆ.

ಕೋಟಿಯಲ್ಲಿ ಎಷ್ಟು ಸೊನ್ನೆ ಇದೆ ಎಂದೇ ನನಗೆ ಸರಿಯಾಗಿ ಗೊತ್ತಿಲ್ಲ. ಕೇಂದ್ರ ಬಜೆಟ್ ಸಮಯದಲ್ಲಿ ಮಂತ್ರಿಗಳು ‘ಲಕ್ಷ ಕೋಟಿ ಅದಕ್ಕೆ, ಲಕ್ಷ ಕೋಟಿ ಇದಕ್ಕೆ’ ಎಂದು, ಮಧ್ಯೆ ಮಧ್ಯೆ ನೀರು ಗುಟುಕರಿಸುತ್ತಾ, ಲೀಲಾಜಾಲವಾಗಿ ಹೇಳುವುದನ್ನು ಕೇಳಿದ್ದೇನೆ. ಕೊನೆಗೆ ನನಗೆ ಅರ್ಥವಾಗುವುದು ಆದಾಯ ತೆರಿಗೆ ಮಿತಿ ಮಾತ್ರ. ಹಾಗಿರುವಾಗ ಟ್ರಿಲಿಯನ್ ಎಂದರೆ ಎಷ್ಟಿರಬಹುದು?

ಗೂಗಲಿಸಿದರೆ ಅದು ‘ನಿಮಗೆ ಬ್ರಿಟಿಷ್ ಟ್ರಿಲಿಯನ್ ಬೇಕೋ ಅಮೆರಿಕನ್ ಟ್ರಿಲಿಯನ್ ಬೇಕೋ?’ ಎಂದು ಕೇಳಿತು. ಅರೆ! ಟ್ರಿಲಿಯನ್‌
ನಲ್ಲಿ ಎರಡು ಪ್ರಭೇದಗಳಿವೆ! ಬ್ರಿಟಿಷ್ ಮಂದಿಗೆ 1ರ ಪಕ್ಕ 18 ಸೊನ್ನೆಗಳು ಹಾಕಿದರೆ ಒಂದು ಟ್ರಿಲಿಯನ್; ಅಮೆರಿಕನ್ನರಿಗೆ 12 ಸೊನ್ನೆಗಳು ಸಾಕು. ಅಷ್ಟರಮಟ್ಟಿಗೆ ಅವರ ಗಣಿತ ಸುಲಭ. ಅಂದರೆ ಬ್ರಿಟನ್ನರು ಅಫ್ಗಾನಿಸ್ತಾನದಲ್ಲಿ ಮೂಗು ತೂರಿಸಿದ್ದಿದ್ದರೆ ಅಮೆರಿಕನ್ನರಿಗಿಂತ ಹೆಚ್ಚು ಹಾನಿಗೊಳಗಾಗುತ್ತಿದ್ದರು ಎಂದು ಸಿಂಪಲ್ ಕ್ಯಾಲ್ಕ್ಯುಲೇಷನ್ ಹೇಳುತ್ತದೆ, ಇರಲಿ.

‘ರೂಪಾಯಿ ಲೆಕ್ಕದಲ್ಲಿ ಎಷ್ಟಾಗಬಹುದ್ರೀ?’

‘1ರ ಪಕ್ಕದಲ್ಲಿ 12 ಸೊನ್ನೆ ಹಾಕಿ ಅದನ್ನು 72ರಿಂದ ಗುಣಿಸಿ ಅದನ್ನು ಡಬಲ್ ಮಾಡಿದರೆ ಅಮೆರಿಕಕ್ಕೆ ಎಷ್ಟು ರೂಪಾಯಿ ಖರ್ಚಾಯಿತು ಎಂದು ತಿಳಿದುಕೊಳ್ಳಬಹುದು’ ಎಂದು ಹೆಂಡತಿಗೆ ವಿವರಿಸಿದೆ. ‘ಅದ್ಸರೀರಿ, ಅಲ್ಲಿ ಖನಿಜ ಸಂಪತ್ತು 2-3 ಟ್ರಿಲಿಯನ್ ಡಾಲರ್ ಅಂದೆನಲ್ಲ. ಬಂಗಾರ, ಬೆಳ್ಳಿ, ತಾಮ್ರ, ಕ್ಯಾಡ್ಮಿಯಮ್ ಹೀಗೆ ಬೇಕಾದಷ್ಟಿದೆಯಂತೆ. ಯಾರೂ ಇದುವರೆಗೂ ಮೂಸಿಲ್ಲವಂತೆ ಅವುಗಳನ್ನು. ಮತ್ತೆ ಇದೊಂದು ಚಾನ್ಸ್ ಅಲ್ಲವಾ?’ ಎಂದಳು.

‘ಯಾರಿಗೆ?’ ಎಂದೆ. ‘ನಮ್ಮ ಗಣಿಧಣಿಗಳಿಗೆ. ಬಳ್ಳಾರೀಲಂತೂ ಗಣಿಗಾರಿಕೆ ಸಾಧ್ಯವಿಲ್ಲ. ಅಲ್ಲಾದರೂ ಹೋದರೆ ಡಾಲರ್‌ಗಳಲ್ಲೇ ಸಂಪಾದಿಸಬಹುದು. ಹೆಲಿಕಾಪ್ಟರ್ ಬದಲು ಪ್ಲೇನನ್ನೇ ಖರೀದಿಸಬಹುದು’ ಎಂದಳು.

ನನಗ್ಯಾಕೆ ಅದರ ಚಿಂತೆ. ನನ್ನ ಬಳಿ ಸ್ಕೂಟರ್ ಸಹ ಇಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು