ಬುಧವಾರ, ಮೇ 18, 2022
21 °C

ಚುರುಮುರಿ: ಬಲವಂತ ಬಾಲಬೋಧೆ

ಎಸ್.ಬಿ.ರಂಗನಾಥ್ Updated:

ಅಕ್ಷರ ಗಾತ್ರ : | |

Prajavani

‘ಆದದ್ದೆಲ್ಲ ಒಳಿತೇ ಆಯಿತು‌. ನಮ್ಮ ಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತು...’ ಎಂದು ಪಲುಕುತ್ತಿದ್ದ, ಸದಾ ಸಚಿವ ಸ್ಥಾನಾಕಾಂಕ್ಷಿ ಸೀನಿಯರ್ ಶಾಸಕರನ್ನು ಮಡದಿ ಮಾತಿಗೆಳೆದರು- ‘ಇದೇನ್ರೀ, ಬೆಳ್ಳಂಬೆಳಗ್ಗೆ ಪುರಂದರದಾಸರ ಕೀರ್ತನೆ?! ಒಳ್ಳೇದು ಆಗಿರೋದು ಏನು ಮಣ್ಣು? ರಾತ್ರಿ ಕನಸಿನಲ್ಲಿ ಏನಾದ್ರೂ ಮಂತ್ರಿ ಆಗಿದ್ದಿರಾ?’

ಪ್ರಸಕ್ತ ವಿದ್ಯಮಾನಗಳಿಂದ ವಿಚಲಿತರಾದಂತಿದ್ದ ಶಾಸಕರಿಂದ ಪ್ರತಿಕ್ರಿಯೆ ಬರಲಿಲ್ಲ.

‘ಯಾಕ್ರೀ, ಮಂತ್ರಿಗಿರಿಗಾಗಿ ಎರಡು ಸಾರಿ ಬೆಂಬಲಿಗರ ರ‍್ಯಾಲಿ ಮಾಡಿಸಿದಿರಿ. ದಿಲ್ಲಿ ಯಾತ್ರೆ ಮೂರು ಬಾರಿ ಆಯ್ತು. ಯತ್ನ ಮುಂದುವರಿಸೋದಲ್ವೇ? ಈಗ ಸಚಿವರ ರಾಜೀನಾಮೆಯಿಂದ ಇನ್ನೊಂದು ವೇಕೆನ್ಸಿ ಹೆಚ್ಚಾಗಿದೆ’.

‘ಇದನ್ನೆಲ್ಲ ನೋಡಿಯೇ ಪರಿಸ್ಥಿತಿ ತಣ್ಣಗಾಗೋವರೆಗೂ ಸುಮ್ಮನಿರೋಣಾಂತಿದೀನಿ... ಅಲ್ದೆ ನಮ್ಮ ಸೀಎಂ ಸಹ ಆದಿತ್ಯನಾಥರ ಥರ ಮಾಡಿ ಬಿಟ್ರೆ ಕಷ್ಟ. ಹೈಕಮಾಂಡಿಂದ ಅವ್ರ ಮಾಡೆಲ್ ಅನುಸರಿಸೀಂತ ಆದೇಶ ಬಂದರೂ ಬರಬೌದು’.

‘ಅವರ ಮಾಡೆಲ್ ಏನ್ರೀ?’

‘ಅವ್ರು ಬುಲ್‌ಡೋಜರ್ ಬಾಬಾ. ವಿರೋಧಿ ಗಳನ್ನ ಎಲಿಮಿನೇಟ್ ಮಾಡೋದ್ರಲ್ಲಿ ಎತ್ತಿದ ಕೈ’.

‘ನಮ್ಮ ಸಾಧುಪ್ರಾಣಿ ಸೀಎಂ ಕೈಲಿ ಅದು ಆಗದ ಮಾತು ಬಿಡ್ರಿ’.

‘ಮತ್ತೆ ಮಂತ್ರಿಗಳನ್ನ ಸ್ಕೂಲ್ ಮಕ್ಕಳೂಂತ ಆದಿತ್ಯನಾಥ್ ತಿಳ್ಕೊಂಡಂತಿದೆ‌. ಸಮಯಕ್ಕೆ ಸರಿಯಾಗಿ ಆಫೀಸಿಗೆ ಬರಬೇಕು. ಕ್ಷೇತ್ರ ಪ್ರವಾಸ ಮಾಡ್ಬೇಕು. ಸರ್ಕಾರಿ ಪ್ರವಾಸಿ ಮಂದಿರಗಳಲ್ಲೇ ತಂಗಬೇಕು ಅಂತೆಲ್ಲ ಫರ್ಮಾನು ಹೊರಡಿಸಿದಾರೆ. ಅಂಥ ಭಾಗ್ಯಕ್ಕೆ ಯಾಕೆ ಮಂತ್ರಿಯಾಗ್ಬೇಕು?’

‘ಪ್ರಧಾನಿಗಳ ಕ್ಷೇತ್ರ ವಾರಾಣಸಿಯ ವಿಧಾನಪರಿಷತ್ ಚುನಾವಣೆಯಲ್ಲಿ ಕಮಲ ಪಕ್ಷ ಸೋತಿರೋದ್ರಿಂದ ಅವರಿಗೆ ಸಿಟ್ಟು ಬಂದಿರಬೇಕು... ಅದೂ ಮಾಫಿಯಾ ಡಾನ್ ಹೆಂಡತಿ ಎದುರು‌’.

‘ಆದರೆ, ನಮ್ಮ ಈ ಸರ್ಕಾರದ ಅವಧಿ ಉಳಿದಿರೋದು ಇನ್ನೊಂದೇ ವರ್ಷ. ಅದಕ್ಕಾಗಿ ಯಾಕಿಷ್ಟು ಕಸರತ್ತೂಂತ’.

ಯಜಮಾನರ ದೂರಾಲೋಚನೆಗೆ ಮೇಡಮ್ ಬೆರಗಾಗಿ ತಲೆದೂಗುತ್ತಿದ್ದಂತೆ, ಒಳಗಿನಿಂದ ಮೊಮ್ಮಗ ಓದಿಕೊಳ್ಳುತ್ತಿದ್ದ ‘ನರಿ ಮತ್ತು ದ್ರಾಕ್ಷಿ’ ಬಾಲಬೋಧೆ ಕಥೆ ಕಿವಿಗೆ ಬಿತ್ತು!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು