ಶುಕ್ರವಾರ, ಜನವರಿ 28, 2022
25 °C

ಚುರುಮುರಿ | ಬೇತಾಳನ ಪ್ರಶ್ನೆ

ಸುಮಂಗಲಾ Updated:

ಅಕ್ಷರ ಗಾತ್ರ : | |

ರಾತ್ರಿ ಹೆಗ್ಗಣ ಹಿಡಿಯಲು ಹೊರಗೆ ಅಂಡಲೆಯುತ್ತಿದ್ದ ಬೆಕ್ಕಣ್ಣನ ಹೆಗಲಿನ ಮೇಲೆ ಯಾರೋ ಧೊಪ್ಪನೆ ಕೂತಂತೆ ಅನ್ನಿಸಿತು. ಬೆಕ್ಕಣ್ಣ ಮೈಕೊಡವಿಕೊಂಡಿತು. ಆದರೆ ಬೆನ್ನೇರಿದ ಬೇತಾಳ ಬಿಡುವುದುಂಟೇ?

‘ಎಲೈ ಬೆಕ್ಕಣ್ಣನೇ... ಪ್ರಶ್ನೆಗಳಿಗೆಲ್ಲ ಸರಿಯುತ್ತರ ಹೇಳದಿದ್ದರೆ ನಿನ್ನ ತಲೆ ಸಹಸ್ರ ಹೋಳಾದೀತು’ ಎಂದು ಬೇತಾಳ ಪ್ರಶ್ನಿಸಲು ಶುರುವಿಟ್ಟಿತು. ‘ಮಂಗಮಾಯ, ಮಟಾಮಾಯ ಈ ಪದಕ್ಕೆ ಸಮಾನಾರ್ಥಕ ಪದಗಳು ಯಾವುವು?’

‘ಬಿಟ್ ಕಾಯಿನ್, ಕೋಟ್ಯಂತರ ಹಣ ವರ್ಗಾವಣೆ, ಶ್ರೀಕಿ, ಈ ಮೂರೂ ಪದಗಳು ಮಂಗಮಾಯ, ಮಟಾಮಾಯ ಪದದ ಸಮಾನಾರ್ಥಕ ಪದಗಳು’.

‘ಭರತಖಂಡದಲ್ಲಿ ಎಲ್ಲರಿಗಿಂತ ಶಕ್ತಿಶಾಲಿ ಯಾರು?

‘ಕೊರೊನಣ್ಣನನ್ನು ಎರಡೇ ಅಲೆಗೆ ದೂಳೀಪಟ ಮಾಡಿದ ನಮ್ಮ ಮೋದಿಮಾಮನೇ ಶಕ್ತಿಶಾಲಿ. ಆದರೆ ಗಾಳಿಚಳಿಮಳೆ ಲೆಕ್ಕಿಸದೇ ಪ್ರತಿಭಟಿಸುತ್ತಿದ್ದ ರೈತರಿಗೂ ಮಣಿಯದ ಮೋದಿಮಾಮ ಕೊನೆಗೂ ಮೊನ್ನೆ ಮಂಡಿಯೂರಿದ. ಇನ್ನೊಂದು ಶಕ್ತಿಶಾಲಿ ಸಂಗತಿ ಇದೆ. ಅದೆಂದರೆ ಚುನಾವಣೆ... ಇದೀಗ ಬರಲಿರುವ ವಿಧಾನಸಭೆ ಚುನಾವಣೆಗಳು ಮತ್ತು ಮುಂಬರಲಿರುವ ಲೋಕಸಭೆ ಚುನಾವಣೆಯೇ ಎಲ್ಲರಿಗಿಂತ ಶಕ್ತಿಶಾಲಿ’.

‘ಭಲೇ ಬೆಕ್ಕಣ್ಣನೇ... ಮೆಚ್ಚಿದೆ ನಿನ್ನ ವಾದಸರಣಿಯನ್ನು. ಭರತಖಂಡದ ಮುಂದಿನ ಚಂದ್ರಯಾನ ಯಾವಾಗ?’

‘ಚಂದ್ರಯಾನ ಈಗಾಗಲೇ ಶುರುವಾಗಿದೆ, ಗ್ಯಾಸು, ಪೆಟ್ರೋಲ್, ಡೀಸೆಲ್ ಇತ್ಯಾದಿ ಬೆಲೆಗಳು ಈಗಾಗಲೇ ಭೂಕಕ್ಷೆಯನ್ನು ಬಿಟ್ಟು ಮೇಲೆ ಹಾರಿವೆ’ ಎಂದು ಬೆಕ್ಕಣ್ಣ ಪಕಪಕನೆ ನಕ್ಕಿತು.

‘ಎರಡು ಭಾರತಗಳಿವೆಯಂತೆ, ನೀನೆಲ್ಲಿ ಯವ? ವಿವಾದದ ವಾಸನೆಯನ್ನು ಥಟ್ಟನೆ ಗ್ರಹಿಸಿದ ಬೆಕ್ಕಣ್ಣ, ‘ನಾನೀಗ ಏಕ ಭಾರತದಲ್ಲಿ ಬದುಕುತ್ತಿರುವೆ. ಆದರೆ ನೀನಿನ್ನೂ ಜನರ ಬೆನ್ನೇರುವುದ ಕಂಡರೆ ಎರಡಿವೆ ಎಂಬುದರಲ್ಲಿ ಅನುಮಾನವಿಲ್ಲ. ನಿನ್ನ ವಟವೃಕ್ಷವು ಈ ಎರಡರಲ್ಲಿ ಯಾವುದರಲ್ಲಿದೆ?’ ಎಂದು ಮರಳಿ ಪ್ರಶ್ನೆ ಕೇಳಲಾಗಿ, ಬೇತಾಳವು ಬೆಕ್ಕಣ್ಣನ ಬೆನ್ನು ಬಿಟ್ಟು, ಎದ್ದು ಬಿದ್ದು ಓಡಿಹೋಯಿತು!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.