ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ರಿವರ್ಸ್ ಲಂಚ

Last Updated 28 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

‘ಇದೇನ್ರೀ ಅನ್ಯಾಯ? ಲಂಚ ಕೊಡೋರನ್ನ ಹಿಡಿಯೋದು ನೋಡಿದೀನಿ. ಲಂಚ ವಾಪಸ್ ಮಾಡೋರನ್ನ ಹಿಡಿದಿದಾರಲ್ಲ?’ ಎಂದು ಮಡದಿ ಉದ್ಗಾರವೆತ್ತಿದಳು.

‘ಅಮ್ಮಾ ತಾಯಿ, ಲಂಚ ವಾಪಸ್ ಮಾಡೋದು ಎಂದರೇನು ವಿವರಿಸುವಂತಹ
ವಳಾಗು’ ಎಂದು ಕೇಳಿಕೊಂಡೆ.

‘ನನಗೂ ಅರ್ಥವಾಗುತ್ತಿಲ್ಲ. ಪೇಪರಿನಲ್ಲಿ ಬಂದಿದೆ. ಸರ್ಕಾರಿ ಅಧಿಕಾರಿಯೊಬ್ಬ ಮಾಮೂಲಿ ನಂತೆ ಕೆಲಸ ಮಾಡಿಕೊಡಲು ಮಾಮೂಲಿ ಕೇಳಿದಾನೆ. ಅದು ಕಚೇರಿಯಲ್ಲಿ ಮಾಮೂಲಿ ತಾನೆ? ಮಾಮೂಲಿ ಕೊಟ್ಟಾತ ಇತರರಂತೆ ಸುಮ್ಮ ನಿರದೆ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಾನೆ’.

‘ಅದು ಮಾಮೂಲಿನಂತಲ್ಲ. ಲಂಚ ಕೊಟ್ಟ ಮೇಲೆ ದೂರು?’

‘ಹೌದು. ಅದು ತಿಳಿದುಬಂದಾಗ ಮಾಮೂಲಿ ಪಡೆದುಕೊಂಡ ಅಧಿಕಾರಿ ತನ್ನ ಮೇಲೆ ಕ್ರಮ ಜರುಗಿಸಬಹುದು ಎಂದು ಹೆದರಿಕೊಂಡು...’

‘ಅಂದರೆ ಲಂಚ ಪಡೆದ ಮೇಲೂ ಹೆದರುವ
ವರಿದ್ದಾರೆ ಎಂದಾಯಿತು’.

‘ಅದು ಗೊತ್ತಿಲ್ಲ. ಅದಿರಲಿ. ಸ್ವಾರಸ್ಯ ಇರುವುದೇ ಇಲ್ಲಿ. ಮಾಮೂಲಿ ಪಡೆದಾತ ಮಾಮೂಲಿ ಕೊಟ್ಟಾತನನ್ನು ಕರೆದು, ನೀನು ಕೊಟ್ಟ ಹಣ ವಾಪಸ್ ಮಾಡ್ತೀನಿ. ಅಷ್ಟೇ ಅಲ್ಲ ಅದರ ಮೇಲೆ ಒಂದಿಷ್ಟು ಹಣ ಕೊಡ್ತೀನಿ...’

‘ಅಂದರೆ ಇನ್‍ಸೆಂಟಿವ್, ರಿಬೇಟ್ ತರಹ... ಎಷ್ಟು?’

‘50,000 ರೂಪಾಯಿ ಎಕ್ಸ್‌ಟ್ರಾ ಕೊಡ್ತೀನಿ, ಕೇಸ್ ವಾಪಸ್ ತೊಗೋ ಎಂದು ಕೇಳಿಕೊಂಡಿದಾನೆ’.

‘ಸೊ, ಈಗ ಕೊಟ್ಟ ಮಾಮೂಲಿ ಹಣ ಪ್ಲಸ್ ಇನ್‍ಸೆಂಟಿವ್ ಸೇರಿಸಿ ವಾಪಸ್ ಕೊಡುತ್ತಿದ್ದಾಗ ಪೊಲೀಸ್ ಎಂಟ್ರಿ. ಅಧಿಕಾರಿ ಅರೆಸ್ಟ್’.

‘ಈ ರಿವರ್ಸ್ ಲಂಚ ಕೊಟ್ಟಿದ್ದಕ್ಕೆ ಕ್ರಮ ಇಲ್ಲವೇನು?’

‘ರಿವರ್ಸ್ ಲಂಚ?’

‘ಅದೇ ಕೇಸ್ ವಾಪಸ್ ಪಡೆಯಲು ಕೊಟ್ಟಿದ್ದ ಹಣ. ಅದೂ ಒಂದು ತರಹ ಲಂಚ ತಾನೇ?’

‘ಅದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲಾಂತ ಕಾಣುತ್ತದೆ’.

‘ಸರ್ಕಾರ ಮುಂದೆ ಕಾನೂನಿಗೆ ಸೂಕ್ತ ತಿದ್ದು ಪಡಿ ತರಬಹುದು’ ಎಂದು ಮಾತು ಮುಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT