ಸೋಮವಾರ, ಮೇ 23, 2022
28 °C

ಚುರುಮುರಿ| ಕಾವಿ ದೇವರು

ಮಣ್ಣೆ ರಾಜು Updated:

ಅಕ್ಷರ ಗಾತ್ರ : | |

Prajavani

ನಡುರಾತ್ರಿಯಾದರೂ ದೊರೆಗೆ ನಿದ್ರೆ ಹತ್ತಿರಲಿಲ್ಲ. ಆ ಮಗ್ಗುಲು, ಈ ಮಗ್ಗುಲು ಹೊರಳಾಡಿ ಮೈ ನೋವು ಬಂತು ಹೊರತು ನಿದ್ರೆ ಬರಲಿಲ್ಲ.

‘ಪುತ್ರ, ನಿದ್ರೆ ಬಾರದೆ ಯಾಕಿಂಗೆ ಒದ್ದಾಡುತ್ತಿರುವೆ?’ ಅಶರೀರ ಹೆಣ್ಣು ಧ್ವನಿ ಕೇಳಿತು.

‘ಯಾರು ತಾಯಿ ನೀನು?’ ಕೇಳಿದರು ದೊರೆ.

‘ನಾನು ಈ ಸಾಮ್ರಾಜ್ಯದ ಮಹಾಮಾತೆ, ಏನು ನಿನ್ನ ಸಮಸ್ಯೆ...?’

‘ಗೊತ್ತಿದ್ದೂ ಕೇಳ್ತೀಯಲ್ಲ, ಕಣ್ಣು ಬಿಟ್ಟರೆ ಕಾವಿ ಕಲರ್ ರಾಚುತ್ತದೆ. ನನಗೆ ಕಲರ್ ಬ್ಲೈಂಡ್ ಇದೆಯೇ ಅಥವಾ ಕಾವಿ ಕಂಟಕ ಇದೆಯೇ ತಾಯಿ?’

‘ಕಂಟಕ ಅಲ್ಲ, ಕಾವಿದೇವರ ಕೃಪೆ ಇದೆ’.

‘ನಿದ್ರೆ, ನೆಮ್ಮದಿ ಕೆಡಿಸೋದು ಕಾವಿದೇವರ ಕೃಪೆಯೇ? ಎಂಥಾ ಮಾತು ಹೇಳ್ತೀಯಾ ತಾಯಿ...’ ದೊರೆಗೆ ಸಿಟ್ಟಿನ ಬೇಸರ.

‘ನಿನ್ನ ಸಾಮ್ರಾಜ್ಯ, ಸಿಂಹಾಸನದ ಏಳಿಗೆಗೆ ಕಾವಿದೇವರ ಕೃಪಾಕಟಾಕ್ಷದ ಪಾಲು ಹೆಚ್ಚಾಗಿದೆಯಲ್ಲವೇ ಪುತ್ರ?’

‘ಹೌದು ಮಾತೆ, ಈಗ ಕಾವಿದೇವರುಗಳು ಜಾತ್ರೆ ರೂಪದಲ್ಲಿ ದಂಡಯಾತ್ರೆಯಂತೆ ಪಾದಯಾತ್ರೆಯಲ್ಲಿ ಬಂದು ಈ ಹುಲುಮಾನವನ ಮೇಲೆ ಬೀಳುತ್ತಿದ್ದಾರೆ’.

‘ವಿರೋಧಿಗಳಿಗೆ ಬಗ್ಗದ, ವಿಪಕ್ಷದವರಿಗೆ ಜಗ್ಗದ ನೀನು ಕಾವಿಗೆ ಕುಗ್ಗುವೆ ಎಂದರೆ ನಂಬಲಾಗದು. ಕಾವಿ ದೇವರುಗಳು ಅಷ್ಟೈಶ್ವರ್ಯ ಕೇಳುತ್ತಿಲ್ಲ. ತಮ್ಮನ್ನು ನಂಬಿದ ಭಕ್ತಕುಲದ ಹಿತಕ್ಕೆ, ಸಮುದಾಯದ ಒಳಿತಿಗೆ ಕೇಳುತ್ತಾರೆ. ನಾಡ ದೊರೆ ಅಷ್ಟೂ ಮಾಡದಿದ್ದರೆ ಹೇಗೆ?’

‘ಮಾತೆ ನನ್ನ ಸಮಸ್ಯೆ ಅರ್ಥ ಮಾಡಿಕೋ. ಈ ಧಾರಾಕಾರ ಧಾರಾವಾಹಿ ಇಷ್ಟಕ್ಕೇ ಮುಗಿಯುವುದಿಲ್ಲ. ಇನ್ನಷ್ಟು ಕಾವಿದೇವರುಗಳು ಮೆರವಣಿಗೆ ಬರಲು ಸಿದ್ಧರಾಗುತ್ತಿದ್ದಾರೆ, ಅವರನ್ನೆಲ್ಲಾ ಹೇಗೆ ಸಂಭಾಳಿಸಲಿ? ಅವರು ಮಠ ಬಿಟ್ಟು ಹೊರ ಬಾರದಂತೆ ಮನವೊಲಿಸು ತಾಯಿ...’‌

‘ಕ್ಷಮಿಸು ಪುತ್ರ, ನನಗೆ ಆ ಶಕ್ತಿ ಇಲ್ಲ, ನೀನೇ ನಿಭಾಯಿಸಿಕೋ...’ ಎಂದು ಮೌನ ತಾಳಿದಳು ಮಾತೆ. ದೊರೆಗಳು ಎದ್ದು ಕುಳಿತು ಚಡಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.