ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ವಿತಂಡವಾದಾಸನ

Last Updated 5 ಜೂನ್ 2022, 19:31 IST
ಅಕ್ಷರ ಗಾತ್ರ

‘ನೋಡಲೇ... ಚೀನಾದವರು ತಮ್ಮದೇ ಸ್ವಂತ ಅಂಬಾನಿ ಮಾಡಿಕೊಳ್ಳಾಕ ಹತ್ಯಾರ’ ಎಂದು ಬೆಕ್ಕಣ್ಣನಿಗೆ ಸುದ್ದಿ ತೋರಿಸಿದೆ.

‘ನಮ್ಮ ಅಂಬಾನಿದು ಇಪ್ಪತ್ತೇಳು ಮಹಡಿ ಅರಮನಿ ಮುಂಬೈನಾಗೈತೆ... ಅವರೇನ್ ಸ್ವಂತ ಮಾಡತಾರ...’ ಎಂದು ಗುರುಗುಟ್ಟಿತು.

‘ನಿಮ್ಮ ಅಂಬಾನಿ ಅರಮನೆ ಭೂಮಿ ಮ್ಯಾಗೈತಿ. ಚೀನಾದವ್ರ ಅಂಬಾನಿ ಆಕಾಶದಾಗೈತಿ, ಅದು ಅಂತರಿಕ್ಷ ಬಾಹ್ಯಾಕಾಶ ನಿಲ್ದಾಣ. ಹಂಗ ಸ್ವಂತ ಅಂಬಾನಿ ಮಾಡೂದಂದ್ರ ರಾತ್ರೋರಾತ್ರಿ ಡಿಮಾನಿಟೈಸೇಶನ್ ಮಾಡಿದಂಗೆ ಅಲ್ಲಲೇ’.

‘ನೀ ಹೊಳ್ಳಂಬಳ್ಳ ನಮ್ ಮೋದಿಮಾಮಾನ ವಿರುದ್ಧ ಏನರ ಹೇಳಬ್ಯಾಡ. ಈ ಎಂಟು ವರ್ಸದಾಗೆ ಮೋದಿಮಾಮಾ ನಮ್ಮ ಕರುನಾಡಿಗೆ 1,29,776 ಕೋಟಿ ರೂಪಾಯಿ ಕೊಡುಗೆ ಕೊಟ್ಟಾರೆ’ ಎಂದು ಎದೆಯುಬ್ಬಿಸಿತು.

‘ಹುಚ್ ಪ್ಯಾಲಿ... ಕೊಡುಗೆ ಅಂದ್ರ ಅದೇನ್ ಉಡುಗೊರೆ ಅಲ್ಲಲೇ. ಕೇಂದ್ರದಿಂದ ರಾಜ್ಯಕ್ಕೆ ಹಕ್ಕುಪ್ರಕಾರ ಬರಬೇಕಾದ ರೊಕ್ಕ, ಅನುದಾನ ಅದು. ವಳ್ಳೆ ಮೋದಿಮಾಮಾ ತನ್ನ ಕಿಸೇದಾಗಿಂದ ಕೊಟ್ಟಂಗ ಮಾತಾಡತೀಯಲ್ಲ’ ಎಂದರೆ ಬೆಕ್ಕಣ್ಣ ಕೇಳುವ ಪೈಕಿಯೇ...

‘ನಮ್ ಹಿರಿಯ ಸಾಹಿತಿ ಭೈರಪ್ಪಾರೂ ಹೇಳ್ಯಾರ, ಸರ್ಜಿಕಲ್ ಸ್ಟ್ರೈಕ್ ಮಾಡೂಮುಂದ ಮೋದಿಮಾಮಾ ಇಡೀ ರಾತ್ರಿ ನಿದ್ದೆ ಮಾಡಿರಲಿಲ್ಲ, ಅದೇ ಚೀನಾ ಯುದ್ಧ ನಡೆದಾಗ ನೆಹರೂ ಗಪ್ಪನೆ ಮಕ್ಕೊಂಡುಬಿಟ್ಟಿದ್ರು ಅಂತ’ ಇನ್ನೊಂದು ವಿತಂಡವಾದಾಸನ ಹಾಕಿತು.

‘ನಿಮ್ಮ ಮೋದಿಮಾಮಾ ನಿದ್ದೆ ಮಾಡಿರಲಿಲ್ಲ ಅಂದ್ರ ಯುದ್ಧಭೂಮಿವಳಗ ಅವರೇ ಕಾದಾಡ್ಯಾರ ಅಂತಲ್ಲಲೇ. ಮಂಗ್ಯಾ... ಹಿಂಗೆಲ್ಲ ವಿತಂಡವಾದಾ ಮಾಡೂದೇ ಬಾಲಿಶ. ಆವಾಗೆಲ್ಲ ಪ್ರಧಾನಿಗಳು ಏನು ಮಾಡತಿದ್ದರು ಅಂತ ಇಷ್ಟೆಲ್ಲ ಜಾಹೀರಾತು ಕೊಡ್ತಿರಲಿಲ್ಲ. ಈಗ ಮೋದಿಮಾಮಾ ಕಣ್ ಮುಚ್ಚಿದ್ದು, ತೆಗೆದಿದ್ದು, ಮೀಟಿಂಗ್ ಮಾಡಿದ್ದು, ಒಟ್ರಾಶಿ ಎಲ್ಲಾನೂ ಜಾಹೀರಾತು ಮಾಡ್ತಾರಷ್ಟೇ. ಗೊತೈತಿಲ್ಲೋ... ಮೋದಿಮಾಮಾರ ಎಂಟುವರ್ಸದಾಗೆ 7,000 ಕೋಟಿ ರೂಪಾಯಿಗೂ ಹೆಚ್ಚು ರೊಕ್ಕ ಜಾಹೀರಾತಿಗೆ ಹಾಕ್ಯಾರೆ. ಹಿಂದಿನ ಯಾವ ಸರ್ಕಾರನೂ ಇಷ್ಟ್ ಖರ್ಚ್ ಮಾಡಿರಲಿಲ್ಲ’ ಎಂದು ನಾನೆಂದರೆ, ‘ಛಲೋ ಅಲ್ಲೇನ್ ಮತ್ತ... ಮಾಧ್ಯಮಗಳೂ ವಿಕಾಸ ಆದುವಲ್ಲ’ ಎನ್ನುತ್ತ ತನ್ನ ಎಂದಿನ ಕೊಂಕುನಗೆ ಬೀರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT