ಶನಿವಾರ, ಆಗಸ್ಟ್ 20, 2022
21 °C

ಚುರುಮುರಿ| ಎಲ್ಲಾ ಬಿಟ್ಟು...

ಲಿಂಗರಾಜು ಡಿ.ಎಸ್. Updated:

ಅಕ್ಷರ ಗಾತ್ರ : | |

Prajavani

‘ಹಳೆ ಮಾತ್ರೆ, ಹಳೆ ತುಪ್ಪ, ಹಳೆ ಸೊಪ್ಪು ತರಕೋಗಿ...’ ಅಂತ ತುರೇಮಣೆ ಹಾಡ್ತಾ ಕುಂತುದ್ರು. ‘ಮುಂದುಕ್ಕೆ ಟವಲ್ ಹಾಸ್ಕಳಿ ಸಾ, ಕಾಸು ಬಿದ್ರೂ ಬೀಳಬೌದು’ ಅಂದೆ.

‘ಅಯ್ಯೋ ಬಡ್ಡಿ ಹೈದ್ನೆ, ಈಗ ಹಳೇ ಮಾತ್ರೆ, ಹಳೇ ತುಪ್ಪದ ಕಟರು ವಾಸನೆ ಜಾಸ್ತಿಯಾಗಿ, ಬಿದ್ರೆ ಗಲೀತ ಬೀಳ್ತವೆ ಹೊರತು ಕಾಸಂತೂ ಬೀಳಕಿಲ್ಲ’ ಅಂದ್ರು.

‘ನನ್ನ ಸರ್ಕಾರ ಬೀಳಕ್ಕೆ ಹಳೇ ಮಾತ್ರೇನೆ ಕಾರಣ ಅಂದವ್ರೆ ಕುಮಾರಣ್ಣ?’ ಅಂದೆ.

‘ಅವುರ ಬುಡು, ಏನು ಕಂಡರೂ ನನ್ನ ಸರ್ಕಾರ ಬೀಳಿಸಿದ್ದು ಅದೀಯೆ ಅಂತರೆ. ಅದೇ ಅವರಿಗೆ ದಿವಸಧಾನ್ಯ. ಈಗ ತುಪ್ಪ, ಮಾತ್ರೆ, ಭಂಗಿ ಸೊಪ್ಪು ಯಾರ‍್ಯಾರು ತಗಂದವ್ರೆ ಅಂತ ಪತ್ತೆ ಮಾಡಮು ಬಾ’ ಅಂತ ಕರಕೋದರು.

ಮೊದಲು ಕಂಡುದ್ದು ಶಂಕ್ರಿ-ಸುಮಿ. ‘ಶಂಕರ ಅಂತ ಹೆಸರಿದ್ದ ಮಾತ್ರಕ್ಕೆ ಅನುಮಾನಿಸದು ಸರಿಯಲ್ಲಾ ಕಣ್ರೀ’ ಅಂದ್ರು ವರಿ ಮಾಡಿಕ್ಯಂಡಿದ್ದ ಸುಮಿ. ಕಂಠಿ ಮನೆ ಬಾಗಿಲು ಬಡಿದೋ. ‘ಕಂಠಿ ಮೊನ್ನೆ ರಾಮರಸದ ಪಾಯಸ ಕುಡುದದಿಯಾ ಅಂತ ಪುಕಾರಾಗ್ಯದೆ. ಸೊಪ್ಪು ಎಲ್ಲೀದು?’ ಅಂತ ತುರೇಮಣೆ ಕೇಳಿದರು.

‘ನನ್ನ ಸ್ನೇಯಿತನ ಮನೇಲಿ ತುಪ್ಪ ಹಾಕಿ ಗಸಗಸೆ ಪಾಯಸ ಕೊಟ್ಟುದ್ದು’ ಅಂದ ಕಂಠಿ. ಅದೇ ಟೈಮಿಗೆ ಅತ್ಲಗೆ ಬಂದ ದುಬ್ಬೀರ ‘ಮನ್ನೆ ಎಣ್ಣೆ ಏಟಿಗೆ ತೆಪರೇಸಿ ಅಂದರಾಗಿದ್ನಲ್ಲಾ ಅವುನ್ನ ಕೇಳಿ’ ಅಂದ. ಅಲ್ಲೇ ಕುಂತುದ್ದ ಬೆಕ್ಕಣ್ಣ ‘ನನ್ನೇನು ಕೇಳಂಗಿಲ್ಲ, ಪತ್ತೇದಾರಿಕೆ ಮಾಡತಿದ್ದೆ’ ಅಂತು.

ನಮ್ಮ ತನಿಖೆ ಕೋವಿಡ್‍ಕೇರ್ ಸೆಂಟರಾಯ್ತಲ್ಲ ಅಂತುದ್ದಾಗ ಇಡೀ ವಠಾರವೇ ಬಂದು ‘ಮೊನ್ನೆ ನೀವೆ ಎಲ್ಲಾರಿಗೂ ಮತ್ತಿನ ಮಾತ್ರೆ ಕೊಡ್ಬೇಕು ಅಂತ ಪುಂಗಿದ್ರಿ. ತಪ್ಪು ನಿಮ್ಮದೇ! ನಮಗೂ ಪ್ರಭಾವಿಗಳು ಗೊತ್ತವ್ರೆ!’ ಅಂತ ಜರಿಯದಾ!

ತುರೇಮಣೆ ಗ್ರಹ ಸಚಿವರ ಸ್ಟೈಲಲ್ಲೇ ‘ಎಷ್ಟೇ ಪ್ರಭಾವಿಗಳಿದ್ರೂ ಗಿಣಿ ಸಾಸ್ತ್ರ ನುಡಿಸಿ ಕಠಿಣ ಕ್ರಮ ತಗಂತೀವಿ, ಇದು ಖಚಿತ’ ಅಂತ ಭಂಗೀಕರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು