ಮಂಗಳವಾರ, ಮೇ 18, 2021
30 °C

ಚುರುಮುರಿ| ಶೀಲ್ಡ್ ಯಾರದು?

ಸುಧೀಂದ್ರ Updated:

ಅಕ್ಷರ ಗಾತ್ರ : | |

Prajavani

ಸೆಕೆಂಡ್ ರೌಂಡ್ ಕೊರೊನಾ ವ್ಯಾಕ್ಸಿನ್‌ಗೆಂದು ಹೋದವನಿಗೆ ಅದೆಲ್ಲೂ ಸಿಗದೆ ಸುಸ್ತಾಗಿ ಬಂದು ಮನೇಲಿ ಮಲಗಿದ್ದೆ. ‘ಕೊರೊನಾ ವ್ಯಾಕ್ಸಿನ್ ಮಾಡಿದ್ದು ನಮ್ಮ ಕೋಡಿಹಳ್ಳಿಯವರು ಅನ್ನೋದು ನಿನಗೆ ಗೊತ್ತಾ?’ ಅಂತ ಗೆಳೆಯ ವರದಪ್ಪ ಒಳಗೆ ಬಂದ.

‘ವ್ಯಾಕ್ಸಿನ್- ಗೀಕ್ಸಿನ್ ಅವರು ಮಾಡಿರೋಲ್ಲ, ಅದರ ಬೆಲೆ ಇಳಿಸಿ ಅಂತೇನಾದ್ರೂ ಚಳವಳೀನ ಅವರು ಮಾಡಿರಬಹುದು’ ಅಂದೆ. ‘ನಿನ್ನ ತಲೆ. ಬೆಳಗ್ಗೆಯಿಂದ ವಾಟ್ಸಪ್ನಲ್ಲಿ ವೈರಲ್ ಆಗಿರೋ ಮೆಸೇಜ್ ನೀನಿನ್ನೂ ಓದೇ ಇಲ್ವಾ?’ ಎಂದು ಬೇಸರಿಸಿಕೊಂಡ.

ಮೊಬೈಲ್ ನೋಡಿದರೆ ವರದಪ್ಪನಂತೆ ಇನ್ನೂ ಎಂಟು ಜನ ಅದೇ ಮೆಸೇಜ್ ಫಾರ್ವರ್ಡ್ ಮಾಡಿದ್ದರು. ‘ಕೋಡಿಹಳ್ಳಿ ವಿನಾಯಕ್ ಶೀಲವಂತ್ ಅನ್ನೋ ನಮ್ಮ ಇಂಡಿಯನ್ ಸೈಂಟಿಸ್ಟ್, ಆಕ್ಸ್‌ಫರ್ಡ್‌ನಲ್ಲಿ ರಿಸರ್ಚ್ ಮಾಡ್ತಿದ್ದಾರೆ. ಕೊರೊನಾ ಲಸಿಕೆ ಮಾಡೋವಾಗ ಅವ್ರ ಕಾಂಟ್ರಿಬ್ಯೂಶನ್ ಜಾಸ್ತಿ ಇದೇಂತ ಗೊತ್ತಾಗಿ, ಯೂನಿವರ್ಸಿಟಿಯವರು ಅದಕ್ಕೆ ಕೋವಿಶೀಲ್ಡ್ ಅನ್ನೋ ಹೆಸರು ಇಟ್ಟಿದ್ದಾರೆ’ ಎಂದು ಬರೆದಿತ್ತು.

ಓದುತ್ತಾ ಹೋದಂತೆ ಅವರ ಬಡತನದ ಬಾಲ್ಯ, ಕಾಲೇಜಿನ ಹೋರಾಟ, ಬ್ಯಾಂಕ್ ಸಾಲದಿಂದ ಬ್ರಿಟನ್ನಿಗೆ ಪಯಣ, ದೊಡ್ಡ ವಿಜ್ಞಾನಿಗಳು ಅವರ ರಿಸರ್ಚನ್ನು ಮೊದಲು ತಳ್ಳಿಹಾಕಿದ್ದು, ಕೊನೆಗೊಂದು ದಿನ ಕೊರೊನಾ ಅವರ ವ್ಯಾಕ್ಸಿನ್ನಿಗೆ ಮಣಿದಿದ್ದು... ಸಿನಿಮಾ ಕ್ಲೈಮ್ಯಾಕ್ಸ್ ಸೀನ್‍ಗಳನ್ನು ಸಾಲಾಗಿ ಜೋಡಿಸಿಡಲಾಗಿತ್ತು. ಖುಷಿಯಾಗಿ, ವರದಪ್ಪನಿಗೆ ಇಷ್ಟವಾದ ವೀಣಾ ಸ್ಟೋರ್ಸ್ ವಡೆಯನ್ನು ಸ್ವಿಗ್ಗಿಯಿಂದ ಆರ್ಡರ್ ಮಾಡಿದೆ.‌

ಸಂಜೆ ಫೇಸ್‌ಬುಕ್ ತೆಗೆದರೆ ಅದೇ ಮೆಸೇಜನ್ನು ಹತ್ತು ಜನ ಹಂಚಿಕೊಂಡಿದ್ದರು. ಅದರಲ್ಲಿ ಕತೆಯ ಕ್ಲೈಮ್ಯಾಕ್ಸ್ ಬದಲಾಗಿತ್ತು. ಸೈಂಟಿಸ್ಟ್ ಹೆಸರು ಕೋವೈ ವಿನಾಯಗರ್ ಶೀನಪ್ಪನ್ ಎಂದಿತ್ತು. ಉಳಿದೆಲ್ಲಾ ಕತೆ ರಿಪೀಟಾಗಿತ್ತು.

ಕೋವಿಶೀಲ್ಡ್ ಇನ್ವೆಂಟರ್ ಯಾರು ಅಂತ ಯೋಚಿಸ್ತಿದ್ದ ಹಾಗೆ ವಾಟ್ಸ್‌ಆ್ಯಪ್ ಮೆಸೇಜ್ ಬಂತು. ‘ಕೋವಿಶೀಲ್ಡ್‌ಗೆ ಹೆಸರು ತಂದುಕೊಟ್ಟವರು ಕೋಟುವಾಡ ವಿಜಯಾನಂದ ಶೀಬಯ್ಯ’ ಎಂದಿತ್ತು. ಅವರು ಆಂಧ್ರದವರೊ, ತೆಲಂಗಾಣದವರೊ ತಿಳಿಸಿ ಎಂದು ಕಳುಹಿಸಿದವರಿಗೆ ರಿಪ್ಲೈ ಮಾಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು