ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ| ಸೊಳ್ಳೆಗೊಂದು ಉಂಗುರ!

Last Updated 30 ನವೆಂಬರ್ 2022, 19:31 IST
ಅಕ್ಷರ ಗಾತ್ರ

‘ರೀ, ನಂಗೊಂದು ರಿಂಗ್ ಕೊಡಸ್ತೀರಾ?’

‘ಈಗ... ಯಾವ ರಿಂಗೇ ನಿನಗೆ? ಎಂಗೇಜ್ಮೆಂಟ್ ರಿಂಗ್, ಮ್ಯಾರೇಜ್ ರಿಂಗ್ ಕೊಡ್ಸಿ ಆಗಿದೆಯಲ್ಲ, ನನಗ್ ಮಾತ್ರ ಸಫ‘ರಿಂಗ್’!’

‘ರೀ... ಏನಾದ್ರೂ ಕೊಡಿಸೀ ಅಂದ್ಬಿಟ್ರೆ...’

‘ಸಾರಿ... ಹೇಳು... ಯಾವ ರಿಂಗ್ ಬಿತ್ತು ನಿನ್ನ ಕಣ್ಣಿಗೆ?’

‘ತಂತ್ರಜ್ಞಾನದ ಪುಟದಲ್ಲಿ ಸೊಳ್ಳೆ ಓಡ್ಸೋ ರಿಂಗ್ ಬಗ್ಗೆ ಬಂದಿದೆ. ನೀವು ಈ ತರಹದ ನ್ಯೂಸೇ ನೋಡಲ್ಲ. ನಿಮಗೆ ಮೀಸಲಾತಿ, ಭ್ರಷ್ಟಾಚಾರ, ಪಕ್ಷಾಂತರ...’

‘ಸೊಳ್ಳೆಪರದೆ, ಕ್ರೀಮು, ಕಾಯಿಲ್, ಬ್ಯಾಟು ಆದ್ಮೇಲೆ ರಿಂಗ್ ಬಂತಾ?’

‘ಜರ್ಮನಿಯ ಯೂನಿವರ್ಸಿಟಿಯೊಂದರಲ್ಲಿ ಕಂಡು ಹಿಡಿದಿರೊ ರಾಸಾಯನಿಕ ಉಂಗುರಾ ರೀ, ಇದು. ಸುಮ್ಮನೆ ಬೆರಳ್ಗೆ ಹಾಕಿಕೊಂಡು ಬಿಟ್ರೆ ಆಯ್ತು ಸೊಳ್ಳೆಗಳು ಹತ್ತಿರಕ್ಕೂ ಸುಳಿಯೋಲ್ಲ’.

‘ಗೋಲ್ಡನ್ ರಿಂಗೋ, ಸಿಲ್ವರದೋ ಆದ್ರೆ ಚಂದ, ಇದೆಂಥಾ ರಿಂಗೇ?’

‘ಇಲ್ಲಿ ನೋಡ್ರಿ ಮುತ್ತಿನ ಉಂಗುರದ ತರಹಾನೇ ಅಟ್ರಾಕ್ಟಿವ್ ಆಗಿಯೇ ಮಾಡಿದಾರೆ. ದೇಹಕ್ಕೂ ಏನೂ ತೊಂದ್ರೆ ಇಲ್ಲವಂತೆ’.

‘ಹೋ... ಮುತ್ತಿನ ಉಂಗುರನಾ?! ಹೆಣ್ಣು ಸೊಳ್ಳೆಗಳು ಮುತ್ತಿಕೊಂಡು ಬಿಡಬಹುದು!’

‘ಯಾಕೆ ಗಂಡುಗಳಿಗೇನು ರಿಂಗಿನ ಮೋಹ ಕಡಿಮೆಯೋ? ತೊಡೋದಕ್ಕೆ ಹತ್ತು ಬೆರಳು ಸಾಕಾಗದಷ್ಟು ತೊಡೋರ್ನ ತೋರಿಸ್ತೀನಿ ಬೇಕಾದ್ರೆ. ಇಷ್ಟಾಗಿ ಸುಂದರಿ ಶಕುಂತಲೆನಾ ಪಟಾಯಿಸಿ, ಪ್ರೀತ್ಸಿ ವಾಪಸ್ ಹೋಗೋವಾಗ ಗಂಡಸು ದುಷ್ಯಂತ ಕೊಟ್ಟಿದ್ದು ಉಂಗರಾನೇ ಅಲ್ವೇನ್ರೀ?’

‘ಅಷ್ಟಕ್ಕೂ ಜುಜುಬಿ ಸೊಳ್ಳೆ ಓಡ್ಸೋಕೆ ಜರ್ಮನ್ ಕೆಮಿಕಲ್ ಉಂಗುರಾನಾ?!’

‘ಜುಜುಬಿನಾ?!... ಕಚ್ಚಿ ಡೆಂಗಿ, ಮಲೇರಿಯಾ ಬಂದು ಕ್ಲಿನಿಕ್ಕು, ಆಸ್ಪತ್ರೆ ಅಂತ ಲಕ್ಷ, ಲಕ್ಷ ಖರ್ಚಾದ್ರೆ ಆವಾಗ ರಾಗ ಎಳೀತೀರ’

‘ರಾಗ ಅಂದ ತಕ್ಷಣ ಜ್ಞಾಪಕ ಬಂತು ಹಳೇ ಸಿನಿಮಾ ಹಾಡು- ‘ನೀರಿನಲ್ಲಿ ಅಲೆಯ ಉಂಗುರ, ಭೂಮಿ ಮೇಲೆ ಹೂವಿನುಂಗುರಾ...’

‘ಸೊಳ್ಳೆ ಓಡ್ಸೋಕೆ ಈಗ ಬಂತು, ಸೊಳ್ಳೆ ಓಡ್ಸೋಕೆ ಈಗ ಬಂತು, ಜರ್ಮನಿಯ ಕೆಮಿಕಲ್ ಉಂಗುರಾ... ಆ..ಆ...ಆ...’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT