ಶನಿವಾರ, ಜನವರಿ 29, 2022
23 °C

ಚುರುಮುರಿ: ರಾಗಿ ಬೀಸದು ತಪ್ತದಾ?

ಲಿಂಗರಾಜು ಡಿ.ಎಸ್. Updated:

ಅಕ್ಷರ ಗಾತ್ರ : | |

Prajavani

‘ಸಾ, ಈವತ್ತಿನ ಪೇಪರಿನಗೆ ಕಮೀಸನ್, ಮಾಫಿಯಾ, ರಾಕ್ಷಸರು, ಸಂಚು, ವೈರಸ್ಸಿನದ್ದೇ ಸುದ್ದಿಯಾಗ್ಯದೆ’ ಅಂತಂದೆ.

‘ಹ್ಞೂಂ ಕಲಾ, ಅದುಕ್ಕೆ ಇರಬಕು ಹುಲಿಯಾ ಚಾಮರಾಜನಗರಕ್ಕೋಗಿ ‘ರಾಕ್ಸಸರು ಇದಾನಸೌದದಗೇ ಬಂದು ಕುಂತವ್ರೆ. ಅವರುನ್ನ ಓಡಿಸಬಕು ತಯಾರಿ ತಗಳಿ’ ಅಂತ ಗರ್ಜಿಸಿದ್ದು’ ಅಂತ ತುರೇಮಣೆ ಅಂದುದ್ಕೆ ಯಂಟಪ್ಪಣ್ಣ, ‘ಅವೇಗ್ಯ ನನ ಮಕ್ಕಳಾ, ಕೆಂಗಲ್ಲು ಇದಾನಸೌದ ಕಟ್ಟಿದ ಮ್ಯಾಲೆ ಈತರದ ಹುನ್ನಾರ ಇದಾನಸೌದದ ಒಳಗೆ ನಡೀತದೆ ಅಂತ್ಲೇ ಅಂದ್ಕಂಡಿರಲಿಲ್ಲ. ಈಗ್ಲವು ಇದಾನಸೌದದೊಳಗೆ ತೊಡೆ ತಟ್ಟಿ ಆಯ್ತು, ಕುಸ್ತಿ ಮಾಡಿ ಆಯ್ತು, ಬಿರಿಯಾನಿ ತರಿಸ್ಕ ತಿಂದು ಮನಿಕಂಡಿದ್ದೂ ಆಯ್ತು!’ ಅಂತು.

‘ಅಣೈ, ಇದಾನಸೌದ ಕಟ್ಟಿದ್ದೋರು ಜೈಲಿನಗಿದ್ದ ಕೈದಿಗಳು. ಅವರು ಸೌದ ಕಟ್ಟದುನ್ನ ದೇಸಸೇವೆ ಅಂತ ಮಾಡಿ ಅವರ ಪಾಪವ ಅಲ್ಲೇ ಬಿಟ್ಟು ಸುದ್ದವಾಗಿ ಹೊಂಟೋದರು. ಈಗ ಇದಾನಸೌದದ ಒಳಗೆ ಆ ಪಾಪಗಳೆಲ್ಲಾ ಬಲಿತು ರಾಕ್ಷಸ ವೈರಸ್ಸಾಗಿ, ಒಳಿಕ್ಕೋದೋರಿಗೆ ಘನವಾಗಿ ಅದುಗಿಕತ್ತವೆ. ಅದುಕ್ಕೇ ಎಲ್ಲಾ ಪಕ್ಸದೋರೂ ಅವರವರೆ ಕಾಲೆಳಕತ್ತರೆ, ಕಂಡಾಬಟ್ಟೆ ಉಗಿದಾಡ್ತರೆ, ಜೈಲಾಟ ಆಡ್ತರೆ!’ ಅಂದ್ರು ತುರೇಮಣೆ.

‘ಸಾ, ಕೊರೋನಾ, ಓಮಿಕ್ರಾನ್ ತಿರುಗಾ ಬೊಂಬೂ ಸವಾರಿ ಸುರು ಮಾಡ್ತವೇನೋ ಅಂತ ಯದಾರಾಯ್ತಾ ಅವೆ. ಇದು ಸಾಲದು ಅಂತ ಇದಾನಸೌದದ ಒಳಗಿನ ರಂಕಲು-ರಾಮಾಣ್ಯ ವೈರಸ್ ಆಗಿ ಬಲೇ ಫಾಸ್ಟಾಗಿ ಹಬ್ಬತಾ ಅವೆ. ಇವು ಆ ಸೋಂಕು ತಂದು ಜನಕ್ಕೆಲ್ಲಾ ಹಂಚತಾವ್ರೆ. ಏನು ಮಾಡದು?’ ಅಂದ ಚಂದ್ರು.

‘ಮಾಡದೇನ್ಲಾ, ಬಸಣ್ಣ ಕುರಿತೇಟಾಗಿ ಯತ್ನಾಳ್ ರಾಜಕೀಯದ ಶಕುನ ಹೇಳ್ತನೆ. ದಕ್ಷಿಣೆ ಮಡಗಿ, ಮುಂದ್ಕೇನಾದದು ಅಂತ ಆಯಪ್ಪನ್ನೇ ಕೇಳನ!’ ಅಂತಂದ್ರು ತುರೇಮಣೆ.

‘ಏನು ಕೇಳಿದ್ರೇನು ಸಾ, ಆಡಳಿತ ರಾಮನದಾದ್ರೂ ರಾವಣನದಾದ್ರೂ ಜನಕ್ಕೆ ರಾಗಿ ಬೀಸದು ತಪ್ಪಕುಲ್ಲ!’ ಅಂದು ಚರ್ಚೆ ಮುಗಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.