ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಮುಕ್ತ ಯೋಗ

Last Updated 24 ಜೂನ್ 2020, 18:45 IST
ಅಕ್ಷರ ಗಾತ್ರ

‘ಕುಟುಂಬ ಯೋಗಾಚರಣೆ ಆಯ್ತೆ?’ ಕಂಠಿಯ ಆಗಮನ.

‘ಶುರುವಾಗಿದೆ, ಇಡೀ ದಿನ ಇರುತ್ತೆ’ ಅತ್ತೆಯ ಉತ್ತರ.

‘ಹೌದು ಅಂಕಲ್, ನಮ್ಮ ಮನೆಯಲ್ಲಿ ಎಲ್ಲರೂ ಯೋಗದಲ್ಲಿ ಭಾಗಿ’ ಪುಟ್ಟಿ ಉವಾಚ.

‘ತಮ್ಮ ತಮ್ಮ ಕೈಲಾದ ಮಟ್ಟಿಗೆ’ ನನ್ನವಳ ಒಗ್ಗರಣೆ.

‘ಸ್ವಲ್ಪ ಬಿಡಿಸಿ ಹೇಳಲಾದೀತೆ?’ ಏನೊಂದೂ ಅರ್ಥವಾಗದೆ ಹುಬ್ಬೇರಿಸಿದೆ.

‘ಯೋಗ ಅಂದರೆ ಒಂದರ್ಥದಲ್ಲಿ ದೇಹ ದಂಡನೆ ಅಲ್ವೆ? ಬೆಳಗ್ಗಿನ ಕಸ ಗುಡಿಸಬೇಕಲ್ಲ... ಇವತ್ತು ವಿಶೇಷವಾಗಿ ಮಂಚ, ದಿವಾನ, ಸೋಫಾದ ಕೆಳಗೆಲ್ಲ ಪೊರಕೆಯಾಡಿಸಿದರು’ ನನ್ನವಳು ಬೀಗಿದಳು.

‘ಕೈ, ಕಾಲು, ಸೊಂಟ... ಎಲ್ಲಕ್ಕೂ ಸಾಕಷ್ಟು ದಂಡನೆ’ ಪುಟ್ಟಿ ಮುಂದುವರಿಸಿದಳು,

‘ಅತ್ತೆಯವರೇ? ಈ ವಯಸ್ಸಿನಲ್ಲೂ? ನಿಮಗೊಂದು ಸಾಷ್ಟಾಂಗ...’

‘ಶ್, ಅವರಲ್ಲ, ನಾನು...’ ದನಿಯೇರಿಸಿ, ಅವನ ‘ನಮಸ್ಕಾರ’ವನ್ನು ತಡೆದೆ.

‘ಇನ್ನೂ ಸಾಕಷ್ಟು ಕಸರತ್ತು ಪ್ರಯೋಗಿಸಲು ಉಳಿದಿವೆ. ಕರಮರ್ದನ ಯೋಗ, ಪಾತ್ರೆಗಳನ್ನು ಚೆನ್ನಾಗಿ ತಿಕ್ಕಿ ಬೆಳಗುವಲ್ಲಿಗೆ ಉಪಯೋಗ. ಒರಳಿನ ಮುಂದೆ ಕುಳಿತು ಒಂದು ಕೈಯಲ್ಲಿ ಕಲ್ಲಾಡಿಸುತ್ತ, ಮತ್ತೊಂದರಲ್ಲಿ ಹಿಟ್ಟು ತಳ್ಳುತ್ತ ಮಾಡಬಹುದಾದ ಕೈ ಸುತ್ತು ಯೋಗ. ಒರಸೋ ಬಟ್ಟೆಯಿಂದ ಕೈಯನ್ನು ನೆಲದ ಮೇಲೆ ಆಡಿಸಿದರೆ ನೆಲ ಸ್ವಚ್ಛ ಯೋಗ. ನೀರಿನಲ್ಲಿ ಬಟ್ಟೆ ಜಾಲಿಸಿದರೆ ಜಲವಸನ ಯೋಗ... ಹೀಗೆ ಬಹಳಷ್ಟು ಇವೆ. ಯಾರಿಗೆ ಯಾವುದು ಬೇಕೋ ತಗೋಬಹುದು’ ಅತ್ತೆ ಧಾರಾಳತನ ತೋರಿದರು.

‘ಆದರೆ ಇವತ್ತು ಫಾದರ್ಸ್ ಡೇ... ಅದಕ್ಕೇ ಈ ಪ್ರಯೋಗಗಳನ್ನೆಲ್ಲ ಅಪ್ಪನಿಗೆ ಮುಕ್ತವಾಗಿ ಬಿಟ್ಟುಕೊಟ್ಟಿದ್ದೀವಿ’ ಪುಟ್ಟಿ ಹಲ್ಕಿರಿದಳು.

‘ಸರಿಯಾಗಿ ಹೇಳಿದೆ ಪುಟ್ಟಿ’ ಎನ್ನುತ್ತಾ ಬಿಸಿಬಿಸಿ ಕಾಫಿ ತಂದಿತ್ತಳು ನನ್ನವಳು.

‘ಮುಕ್ತ ಮುಕ್ತ ಯೋಗ...’ ಕಂಠಿ ಪ್ರಾಸ ಹಾಡಿದ, ಕಾಫಿ ಹೀರುತ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT