ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ವಿಧಾನ-ಸಾಹಿತ್ಯ ಪರಿಷತ್

Last Updated 18 ನವೆಂಬರ್ 2021, 17:08 IST
ಅಕ್ಷರ ಗಾತ್ರ

ಶೀನ, ತಿಂಗಳೇಶನ ಕ್ರಿಸ್ತಪೂರ್ವ ಕಾಲದ ಶಿಷ್ಯ. ಕಲಾಸೇವೆಗಾಗಿಯೇ ಸರ್ಕಾರಿ ನೌಕರಿ ತೊರೆದ ತ್ಯಾಗಿ. ಚೂರು ಸಾಹಿತ್ಯ, ಹಿಡಿ ರಂಗಭೂಮಿ, ಬೊಗಸೆ ಹೋರಾಟ, ಬಕೀಟು ರಾಜಕಾರಣ… ಹೀಗೆ ಸದಾ ಸಾರ್ವಜನಿಕ ಜೀವನದಲ್ಲಿ ಮುಳುಗಿದ ವ್ಯಕ್ತಿ.

ಬೆಳ್ಳಂಬೆಳಿಗ್ಗೆಯೇ ಶೀನನಿಂದ ತಿಂಗಳೇಶನಿಗೆ ಕರೆ: ‘ನಾನಣಾ ಶೀನ ಬೇಸದಿಯಾ…?’

‘ಹ್ಞೂಂ… ಶೀನ, ಏನ್ ಸಮಾಚಾರ…?’

‘ನಿನ್ನ ಸಹಾಯ ಬೇಕಣ್ಣ…’ ತಿಂಗಳೇಶನಿಗೆ ಅಪಾಯದ ಸೂಚನೆ ಸಿಕ್ಕು ಎಚ್ಚರಗೊಂಡ. ‘ನಿನಗೆ ಗೊತ್ತಲ್ಲ ಶೀನ, ಕೋವಿಡ್ ಕಾಲದಲ್ಲಿ ಜೀವನ ನಡೆಸೋದೇ ಕಷ್ಟ ಆಗೇತಿ…’

‘ನೀನೇನಣ್ಣಾ… ಇಂಗ್ ಮಾತಾಡ್ತೀ… ನಾನೇನು ರೊಕ್ಕ ಕೇಳಿದೆನೇನು? ನಂದೇ ಬೇಕಾದಷ್ಟು ಬಿದ್ದೈತಿ. ಕೋವಿಡ್ ಕಾಲದಲ್ಲೂ ಕಲಾದೇವಿ ನನ್ನ ಕೈಬಿಟ್ಟಿಲ್ಲ. ಹೋದ ವರ್ಷ ಅಲಾದಿ ಹತ್ತು ಸರ್ಕಾರಿ ನಾಟಕ ಕಾರ್ಯಕ್ರಮಗಳು ಸಿಕ್ಕಿದ್ವು. ನನ್ನ ಓರಾಟಕ್ಕೆ ಹೆದರಿ ಇಲಾಖೆಯವ್ರು ಆಗಿಂದಾಗ್ಲೇ ಬಿಲ್ ಪಾಸ್ ಮಾಡ್ತಾರೆ’.

ಸದ್ಯ ಬಚಾವಾದೆ ಎಂದುಕೊಂಡ ತಿಂಗಳೇಶ ‘ಛೇ... ನಾನೆಲ್ಲಿ ರೊಕ್ಕ ಕೇಳಿದಿ ಅಂತಂದೆ. ಕೋವಿಡ್ ಹಕೀಕತ್ ಪ್ರಸ್ತಾಪಿಸಿದೆ, ಅಷ್ಟೇ’ ಎಂದ.

‘ನಿನ್ನ ಬೆಂಬಲ ಬೇಕಣಾ…’ ‘ಸಹಾಯ’ ಪದ ‘ಬೆಂಬಲ’ ಆಗಿ ಬದಲಾಗಿದ್ದು ತಿಂಗಳೇಶನಿಗೆ ಇನ್ನಷ್ಟು ನಿರಾಳತೆ ತರಿಸಿತು. ದೆಹಲಿ ಭೇಟಿಯಲ್ಲಿ ಅಭಯ ಪಡೆದ ಮುಖ್ಯಮಂತ್ರಿಯಂತೆ ಆತ್ಮವಿಶ್ವಾಸದಿಂದ ‘ಹೇಳು ಶೀನಾ… ನಿನಗೆ ಇಲ್ಲ ಅಂತೀನಾ?’ ಎಂದ.

‘ಪರಿಷತ್ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಬೇಕು. ಲೋಕಲ್ ಎಮ್ಮೆಲ್ಲೆ, ಎಂಪಿ, ಪಕ್ಷದ ಜಿಲ್ಲಾಧ್ಯಕ್ಷರು ನನ್ನ ಬೆಂಬಲಕ್ಕೆ ನಿಂತಾರೆ’.

‘ಯಾವ ಪಕ್ಷದಿಂದ ಟಿಕೆಟ್ ಸಿಕ್ತಪ್ಪಾ…?’

‘ಅಣಾ, ನಾನು ಸಾಹಿತ್ಯ ಪರಿಷತ್ತಿಗೆ ನಿಂತಿರೋದು; ವಿಧಾನ ಪರಿಷತ್ತಿಗೆ ಅಲ್ಲ. ಇಲ್ಲಿ ಪಕ್ಷ ಟಿಕೆಟ್ ಕೊಡಲ್ಲ, ಬಹಿರಂಗವಾಗಿ ಬೆಂಬಲಿಸುತ್ತದೆ. ಇದೊಂಥರಾ ವಿಧಾನ-ಸಾಹಿತ್ಯ ಪರಿಷತ್ ಚುನಾವಣೆ!’‌

‘ಸಾಹಿತ್ಯ’ ಪರಿಷತ್ತಿನ ಹೊಸ ‘ವಿಧಾನ’ ತಿಳಿಯುವುದಕ್ಕೂ ತಿಂಗಳೇಶನ ಮೊಬೈಲ್ ನೆಟ್‌ವರ್ಕ್ ಕಳೆಯುವುದಕ್ಕೂ ಸರಿಹೋಯ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT