ಶುಕ್ರವಾರ, ಸೆಪ್ಟೆಂಬರ್ 25, 2020
27 °C

ಚುರುಮುರಿ | ಸಂದರ್ಭೋಚಿತ ಉಡುಗೊರೆ

ಕೆ.ವಿ.ರಾಜಲಕ್ಷ್ಮಿ Updated:

ಅಕ್ಷರ ಗಾತ್ರ : | |

ಕೋವಿಡ್‌ ಲಾಕ್‌ಡೌನ್‌

‘ಅಪ್ಪ, 2020 ಅದೃಷ್ಟದ ವರ್ಷ, ಇಸವೀನೂ ಸುಲಭವಾಗಿ ನೆನಪಿಟ್ಟುಕೊಳ್ಳಬಹುದು’ ಪುಟ್ಟಿ ಬೀಗಿದಳು.

‘ಅಲ್ವೇ ಮತ್ತೆ? ಮೊಬೈಲ್, ಲ್ಯಾಪ್‌ಟಾಪ್‌ಗೆ ಅಂಟಿಕೊಂಡಿದ್ದರೂ ಕೇಳೋಹಾಗಿಲ್ಲ- ಆನ್‌ಲೈನ್ ಕ್ಲಾಸ್ ಅನ್ನೋ ನೆಪ... ಕುಳಿತ ಕಡೆ ಎಲ್ಲ ನಡೆಯುತ್ವೆ. ಹಬ್ಬ-ಹರಿದಿನ ಅಂದ್ರೂ ಚಿನ್ನ, ಬೆಳ್ಳಿ ಒಡವೆ ಬಗ್ಗೆ ಉಸಿರೆತ್ತೋ ಹಾಗಿಲ್ಲ. ಅಷ್ಟು ಏರಿವೆ ಬೆಲೆಗಳು. ಎಲ್ಲ ಗೊಡವೆಗಳು ನಮಗೇ... ಇಷ್ಟಾದರೂ ಚಾಕರಿ ಮಾತ್ರ ದುಪ್ಪಟ್ಟು’ ನನ್ನವಳ ಗೊಣಗಾಟ ಶುರುವಾಯಿತು.

‘ಪುಟ್ಟಿ ಹೇಳಿದ್ದರಲ್ಲೂ ಅರ್ಥವಿದೆ. ಎರಡು ದಿನದಿಂದ ಸ್ವಲ್ಪ ಟೀವಿ ನೋಡೋ ಹಾಗಿದೆ. ಕೊರೊನಾ ಸುದ್ದಿಯನ್ನು ಹಿಂದಕ್ಕೆ ಹಾಕಿ ಅಯೋಧ್ಯಾ ಸುದ್ದಿ ನೋಡೋಕ್ಕೂ ಹಾಯೆನಿಸುತ್ತಿದೆ’ ಅತ್ತೆಯ ಸಪೋರ್ಟು.

‘ರಘುಪತಿ ಲಡ್ಡುಗೆ ನಮ್ಮ ರಾಜ್ಯದ ತುಪ್ಪವನ್ನೇ ಬಳಸಿರೋದು. ಇಲ್ಲೇ ತಯಾರಾದ ಕೋದಂಡರಾಮ ಮೂರ್ತಿ ಸ್ಮರಣಿಕೆ, ಎಷ್ಟು ಹೆಮ್ಮೆ’ ನನ್ನ ಮಾತು ಮುಗಿಯುವಷ್ಟರಲ್ಲೇ ಕೈಯಲ್ಲಿ ನಾಲ್ಕೈದು ಪುಸ್ತಕಗಳ ಕಟ್ಟು ಹಿಡಿದು ಕಂಠಿ ಬಂದ.

‘ಇದೇನು ಪುಸ್ತಕಪ್ರೇಮ?’ ಎಂದೆ.

‘ಪ್ರೆಸಿಡೆಂಟ್ ಸರೋಜಾ ಮೇಡಂಗೆ ಕೊಡೋಕ್ಕೆ’ ಎಂದು ನನ್ನವಳಿಗೆ ಕೊಟ್ಟ.

‘ಮನೇಲಿ ರೆಸ್ಟ್‌ನಲ್ಲಿ ಇದ್ದಾರಲ್ಲ, ಅದಕ್ಕೇ ಒಳ್ಳೆಯ ಪುಸ್ತಕಗಳನ್ನು ಓದೋಕ್ಕೆ ನಮ್ಮ ಕೊಡುಗೆ’ ಎಂದಳು ನನ್ನವಳು ಕಣ್ಣರಳಿಸಿ.

‘ಅಬ್ಬಾ! ಭೇಷ್, ವಿರೋಧ ಪಕ್ಷದಲ್ಲಿದ್ದರೂ ಎಷ್ಟು ವಿಶಾಲ ಹೃದಯ’ ಹೊಗಳಿದೆ.

‘ಹಾಸಿಗೆ ಹಿಡಿದಾಗ ಮಾನವೀಯತೆ ಮುಖ್ಯಾರೀ, ಅದೂ ಅಲ್ಲದೆ ಮಾತ್ರೆ ನುಂಗಿದರೂ ನಿದ್ದೆ ಹತ್ತುತ್ತಿಲ್ಲ ಅಂತ ಬೇಸರಿಸಿಕೊಂಡರು. ಅದಕ್ಕೇ, ಈ ಪುಸ್ತಕಗಳನ್ನು ಕೊಟ್ಟು ವಿಚಾರಿಸಿಕೊಂಡರೆ, ಉದ್ದೇಶ ಈಡೇರುತ್ತೆ. ಓದಿ ಅರ್ಥವಾದರೆ ಜ್ಞಾನ ಸಂಪಾದನೆ, ಇಲ್ಲದಿದ್ದರೆ ನಿದ್ದೆ ಆವರಿಸುವುದು ಗ್ಯಾರಂಟಿ’.

ಸಂದರ್ಭೋಚಿತ ಉಡುಗೊರೆ, ಐಡಿಯಾ ಖಂಡಿತ ಕಂಠಿಯದು ಎಂಬುದು ಗ್ಯಾರಂಟಿಯಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು