ಭಾನುವಾರ, ಜುಲೈ 3, 2022
25 °C

ಚುರುಮುರಿ: ವ್ಯಾಕ್ಸಿನ್ ಚಿತ್ರಣ

ಸುಮಂಗಲಾ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತದಿಂದ ವರ್ಕ್ ಫ್ರಮ್ ಹೋಂನಲ್ಲಿದ್ದ ಸಹೋದ್ಯೋಗಿಯೊಂದಿಗೆ ವಿಡಿಯೊ ಕಾಲ್‌ನಲ್ಲಿದ್ದೆ. ನಡುವೆ ಬಂದ ಬೆಕ್ಕಣ್ಣ ‘ನೀನು ಮೋದಿ ಚಿತ್ರದ ವ್ಯಾಕ್ಸಿನು ಹಾಕಿಸಿಕೊಂಡೀಯೋ ಅಥವಾ ದೀದಿ ಚಿತ್ರದ್ದಾ?’ ಎಂದು ಅವನಿಗೆ ಕೇಳಿತು.

ಮಾರ್ಜಾಲ ಪ್ರಶ್ನೆ ಅರ್ಥವಾಗದೆ ಅವನು ತಲೆ ಕೆರೆದುಕೊಂಡ.

‘ಕೋವಿಶೀಲ್ಡು, ಕೋವ್ಯಾಕ್ಸಿನು, ಸ್ಪುಟ್ನಿಕ್, ಫೈಜರ್ ಈ ಎಲ್ಲಾ ಕೇಳೀವಿ. ಅದ್ಯಾವುದಲೇ ಹೊಸಾ ವ್ಯಾಕ್ಸಿನು’ ಎಂದೆ ಅಚ್ಚರಿಯಿಂದ.

‘ವ್ಯಾಕ್ಸಿನ್‌ ಹಾಕಿಸಿಗೆಂಡ ಮ್ಯಾಲೆ ಸರ್ಟಿಫಿಕೇಟ್ ಕೊಡ್ತಾರಲ್ಲ, ಅದ್ರಾಗೆ ನಮ್ಮ ಮೋದಿಮಾಮನ ಚಿತ್ರ ಇರತೈತಲ್ಲ. ಹಂಗ ಬಂಗಾಳದಾಗೆ ರಾಜ್ಯ ಸರ್ಕಾರ ರೊಕ್ಕ ಕೊಟ್ಟ ತಗಂಡ ವ್ಯಾಕ್ಸಿನ್ ಹಾಕಿಸ್ಕೆಂಡರೆ ಸರ್ಟಿಫಿಕೇಟಿನಾಗೆ ದೀದಿ ಚಿತ್ರ ಇರತೈತಂತ. ನಮ್ಮಲ್ಲೂ ಹೀಂಗ ರಾಜ್ಯದ ರೊಕ್ಕದಾಗೆ ಖರೀದಿ ಮಾಡಿರೂ ವ್ಯಾಕ್ಸಿನ್ ಸರ್ಟಿಫಿಕೇಟಿನಾಗೆ ಯಡ್ಯೂರಜ್ಜಾರ ಫೋಟೊ ಇರಬೇಕಿತ್ತು’ ಎಂದು ಬೆಕ್ಕಣ್ಣ ಉದ್ದಕ್ಕೆ ವಿವರಿಸಿತು.

‘ನಿಮ್ಮ ಅಜ್ಜಾರಿಗಿ ಕುರ್ಚಿ ಉಳಿದ್ರ ಸಾಕಾಗೇತಿ, ಒಂದು ಕಾಲು ಅಲುಗಾಡತೈತಿ ಅಂತ ಬೆಣೆ ಹೊಡೆದು ಸರಿ ಮಾಡೂ ಹೊತ್ತಿಗೆ ಇನ್ನೊಂದು ಕಾಲು ಅಲುಗಾಡತೈತಿ. ಹಿಂತಾ ಕಾರುಬಾರಿಗೆ ಟೈಮ್ ಎಲ್ಲೈತಿ?’ ಎಂದೆ.

‘ಸರ್ಕಾರದಿಂದ ಉಚಿತ ವ್ಯಾಕ್ಸಿನ್ ತಗಂಡರ ಸರ್ಟಿಫಿಕೇಟಿನಾಗೆ ಅವರ ಫೋಟೊ ಇರೂದು ಬರೋಬ್ಬರಿ. ಆದ್ರೆ ರೊಕ್ಕ ಇದ್ದವರು ಖಾಸಗಿ ಆಸ್ಪತ್ರೆವಳಗ ಸಾವಿರಗಟ್ಟಲೆ ಕೊಟ್ಟು ಹಾಕಿಸಿಕೊಂಡ್ರ, ಆವಾಗ ಯಾರ ಫೋಟೊ ಇರಬೇಕು? ರೊಕ್ಕ ಕೊಟ್ಟು ವ್ಯಾಕ್ಸಿನು ಹಾಕಿಸಿಕೊಳ್ಳೂ ಮಂದಿ ಸರ್ಟಿಫಿಕೇಟಿನಾಗೆ ‘ನಮ್ಮದೇ ಫೋಟೊ ಪ್ರಿಂಟು ಮಾಡ್ರಿ’ ಅಂದ್ರ ಆವಾಗೇನು ಮಾಡದು? ಅದಕ್ಕೇ ಖರೇ ಅಂದ್ರ, ಯಾರು ವ್ಯಾಕ್ಸಿನು ಕಂಡುಹಿಡಿದ್ರೋ ಆ ವಿಜ್ಞಾನಿ ಅಥವಾ ಆ ಕಂಪನಿ ಫೋಟೊ ಹಾಕೂದೇ ಬರೋಬ್ಬರಿ’ ಬಂಗಾಳಿ ಬಾಬು ವಾದ ಮಂಡಿಸಿದ.

‘ಸರ್ಟಿಫಿಕೇಟಿನಾಗೆ ಕೊರೊನಣ್ಣನ ಚಿತ್ರನೇ ಇರಬೇಕಿತ್ತು. ಕೊನೇಪಕ್ಷ ಅಂವ ಜಾತಿ, ಧರ್ಮ ಅಂತಸ್ತು ಅಂತೆಲ್ಲ ಭೇದಭಾವ ಮಾಡದೆ ಎಲ್ಲಾರನ್ನೂ ಸಮಾನವಾಗಿ ಕಾಣತಾನ’ ಬೆಕ್ಕಣ್ಣ ಜಾಣನಗು ಬೀರಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು