ಭಾನುವಾರ, ಜನವರಿ 26, 2020
21 °C

ಭಕ್ತಿಗಣ್ಣಿನಲ್ಲಿ ತಾರೆಯರು

ಸುಮಂಗಲಾ Updated:

ಅಕ್ಷರ ಗಾತ್ರ : | |

Prajavani

ಅರ್ಧ ಶತಮಾನದ ಹಿಂದೆ ‘ಮುಂಬಯಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್’ ಏರ್ಪಡಿಸಿದ್ದ ಜನಪ್ರಿಯ ತಾರೆ ಯಾರೆಂಬ ಅಭಿಪ್ರಾಯ ಸಮೀಕ್ಷೆಯಲ್ಲಿ ವಿದ್ಯಾರ್ಥಿಗಳು ಶರ್ಮಿಳಾ ಟಾಗೋರ್‌ಗೆ ಪ್ರಥಮ ಹಾಗೂ ವಹಿದಾ ರೆಹಮಾನ್‌ಗೆ ದ್ವಿತೀಯ ಸ್ಥಾನ ನೀಡಿದ್ದರಂತೆ! ಇದೇ ಪತ್ರಿಕೆಯಲ್ಲಿ ‘50 ವರ್ಷಗಳ ಹಿಂದೆ’ ಅಂಕಣದಲ್ಲಿ ಈ ಸುದ್ದಿ ಓದಿದ ಇಂದಿನ ಅಭಾವಿಪ, ವಿದ್ಯಾರ್ಥಿಗಳಿಂದ ಮೊನ್ನೆ ಅಭಿಪ್ರಾಯ ಸಮೀಕ್ಷೆ ಮಾಡಿತು. ಹಾಗಿದ್ದರೆ ಈಗಿನ ವಿದ್ಯಾರ್ಥಿಗಳ ‘ಭಕ್ತಿಗಣ್ಣಿನಲ್ಲಿ’ ಯಾರು ಜನಪ್ರಿಯ ತಾರೆಯರು?

ವಹಿದಾ ರೆಹಮಾನ್‍ ಆಗಲೀ, ಮನ್ಸೂರ್ ಅಲಿಖಾನ್ ಪಟೌಡಿಯವರನ್ನು ಮದುವೆಯಾಗಿದ್ದ ಶರ್ಮಿಳಾ ಆಗಲೀ ಇಂದು ಆಯ್ಕೆಯಾಗಲು ಸಾಧ್ಯವೇ ಇಲ್ಲ. ‘ತುಕ್ಡೆ ತುಕ್ಡೆ’ ಗ್ಯಾಂಗಿನ ಪರ ನಿಲ್ಲುವ ದೀಪಿಕಾ ಪಡುಕೋಣೆ, ಸ್ವರಾ ಭಾಸ್ಕರ್... ನೋ ಚಾನ್ಸ್! ಹಾಗಿದ್ದರೆ ಇನ್ನಾರು? ಪ್ರಥಮ ಸ್ಥಾನ ಖಂಡಿತವಾಗಿಯೂ ಒಂದುಕಾಲದ ಕಿರಿ-ಹಿರಿತೆರೆಯ ತಾರೆ ಸ್ಮೃತಿ ಇರಾನಿಗೆ ಸಲ್ಲಬೇಕು! ನಟರಲ್ಲಿ ಅಕ್ಷೀಕುಮಾರ, ವಿವೇಕ ಓಬಿರಾಯನ ನಡುವೆ ಜಿದ್ದಾಜಿದ್ದಿಯ ಸ್ಪರ್ಧೆ. ನಮೋ ಸಂದರ್ಶಿಸಿದ ಅಕ್ಷೀಕುಮಾರ ಭಾರೀ ಜನಪ್ರಿಯ ನಟನೆಂದು ಒಂದಿಷ್ಟು ವಿದ್ಯಾರ್ಥಿಗಳು, ಮೋದಿ ಬಯೋಪಿಕ್ ಸಿನಿಮಾದಲ್ಲಿ ಅವರ ಪಾತ್ರ ಮಾಡಿರುವ ಓಬಿರಾಯನಿಗೆ ಮೊದಲ ಸ್ಥಾನ ಎಂದು ಎಲ್ಲ ಮಿತ್ರೋಂಗಳು, ಮೌನಿಬಾಬಾ ಸಿಂಗ್ ಪಾತ್ರದಲ್ಲಿ ಮಿಂಚಿರುವ ಅನುಪಮ ಖೀರಣ್ಣನಿಗೆ ಮೊದಲ ಸ್ಥಾನ ಎಂದು ಇನ್ನಷ್ಟು ವಿದ್ಯಾರ್ಥಿಗಳು... ನಾಳೆ ಪಟ್ಟಿ ಬಿಡುಗಡೆ ಮಾಡುವ ಎಂದು ನಿರ್ಧರಿಸಿ ಎಬಿವಿಪಿ ಪ್ರಧಾನರು ಮಲಗಿಕೊಂಡರು.

ಬೆಳಗ್ಗೆದ್ದು ನೋಡಿದರೆ ಪಟ್ಟಿ ಆಟೊಮೆಟಿಕ್ ಅಪ್ಡೇಟ್ ಆಗಿ, ಪ್ರಥಮ ಸ್ಥಾನದಲ್ಲಿ ಖುದ್ದು ನಮೋ ಹೆಸರಂತೆ! ಸರಿಯಾಗಿಯೇ ಇದೆಯಲ್ಲವೇ ಮತ್ತೆ... ಇಂಥ ವಾಗ್ವಿಲಾಸದ ನಟಭಯಂಕರ ಇರುವಾಗ ನೀವು ಹಾಗೆಲ್ಲ ಅವರಿವರನ್ನು (ಎಷ್ಟೇ ದೇಶಭಕ್ತರಾದರೂ) ಆಯ್ಕೆ ಮಾಡುವುದುಂಟೇ! ದ್ವಿತೀಯ ಸ್ಥಾನವನ್ನು ‘ಶಾ’ಣ್ಯಾ ಮತ್ತು ಇರಾನಿಯವರ ನಡುವೆ ಹಂಚಲಾಗಿದೆಯಂತೆ. ಮೂರನೇ ಸ್ಥಾನಕ್ಕೆ ಅಕ್ಷೀಕುಮಾರ, ಓಬಿರಾಯ, ಖೀರಣ್ಣ, ಮಾತ್ರವಲ್ಲದೆ ಕಮಲಕ್ಕನ ಇನ್ನುಳಿದ ರಾಷ್ಟ್ರಭಕ್ತ ಮಕ್ಕಳ ಒಂದು ದೊಡ್ಡ ಪಡೆಯೇ ನಾಮನಿರ್ದೇಶನಗೊಂಡಿದೆಯಂತೆ!

ಪ್ರತಿಕ್ರಿಯಿಸಿ (+)