ಮಂಗಳವಾರ, ಜೂನ್ 15, 2021
23 °C

ಚುರುಮುರಿ: ಈ ಮೂರನ್ನು ಬಿಟ್ಟು...

ಕೆ.ವಿ.ರಾಜಲಕ್ಷ್ಮಿ Updated:

ಅಕ್ಷರ ಗಾತ್ರ : | |

Prajavani

‘ಯಾಕೋ ಕಾಫಿ ಉಪ್ಪುಪ್ಪು...’ ಮುಖ ಕಿವುಚಿದೆ.

‘ಅಮ್ಮನ ಕನ್ನಡಕ ಕೈಜಾರಿ ಬಿತ್ತು, ಸಕ್ಕರೆ, ಉಪ್ಪು ವ್ಯತ್ಯಾಸ ತಿಳೀದೆ ಹೀಗಾಯ್ತು, ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ’ ನನ್ನವಳ ಬಿನ್ನಹ.

‘ಏನಾದ್ರೂ ಮಾಡಿ, ನನಗೆ ಇನ್ನೊಂದು ಕನ್ನಡಕ ಅರ್ಜೆಂಟಾಗಿ ಬೇಕು. ಕನ್ನಡಕ ಹಾಕದಿದ್ರೆ ನನಗೆ ಏನೂ ಕಾಣವಲ್ದು. ಅದಕ್ಕೇ ಹೀಗೆ ಎಡವಟ್ಟು’ ಅತ್ತೆ ಅಲವತ್ತುಕೊಂಡರು.

ನಿಜ, ಸುಲೋಚನಾರಹಿತ ಅತ್ತೆಯನ್ನು ನೋಡಲಾಗದು ಆದರೆ...

‘ಈ ಲಾಕ್‌ಡೌನ್‌ನಲ್ಲಿ ಒದಗಿಸೋದು ಕಷ್ಟವೇ. ಯಾಕಂದ್ರೆ ಮಾರ್ಗಸೂಚಿಯಲ್ಲಿ ಕಾಣಿಸಿರೋ ಹಾಲು, ತರಕಾರಿ, ದಿನಸಿ, ಔಷಧಿ ಬ್ರ್ಯಾಕೆಟ್ಟಿಗೆ ಅದು ಸೇರೋಲ್ಲ. ಅಂದ್ರೆ ಕನ್ನಡಕ ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಇಲ್ಲ. ಹಾಗೊಮ್ಮೆ ಅಗತ್ಯ ಅಂದ್ರೂ ಕನ್ನಡಕದ ಅಂಗಡಿ ತೆಗೆಯೋದು ಹತ್ತು ಗಂಟೆ ಮೇಲೆ. ನಿಮಗೆ ಗೊತ್ತಿರೋ ಹಾಗೆ ಹತ್ತರ ಮೇಲೆ ಕತ್ತು ಹೊರಹಾಕಿದರೆ ಕುತ್ತು ಗ್ಯಾರಂಟಿ’ ಹೊರಗೆ ಹೋಗಲಾಗದು ಎಂದು ಮೆಲ್ಲಗೆ ಜಾರಿಕೊಂಡೆ.

‘ಅಗತ್ಯ ಅನ್ನೋದು ಸಂದರ್ಭಾನುಸಾರ ರಿಲೇಟಿವ್ ಟರ್ಮ್ ಅಲ್ವೇನಪ್ಪಾ? ಉದಾಹರಣೆಗೆ ನಮಗೆ ಮೊಬೈಲ್, ಇಂಟರ್ನೆಟ್’ ಪುಟ್ಟಿಯ ಸಮರ್ಥನೆ.

ಅಷ್ಟರಲ್ಲೇ ಕಣ್ಣು ಮಾತ್ರ ಕಾಣಿಸುವಂತೆ ಮುಖಗವಸು ಎಳೆದುಕೊಂಡು ಕಂಠಿ ಬಂದ.

‘ಬಾಸ್‌ಗೂ ಮೇಡಂಗೂ ಲಸಿಕೆಗೆ ಟೋಕನ್ ತಗೊಂಡು ಬಂದೆ. ಆ ಕೆಲಸ ಮುಗಿದರೆ ಒಂದಷ್ಟು ಕಿಸೆ ತುಂಬುತ್ತೆ’ ಹೊಟ್ಟೆಯುರಿಸಿದ.

‘ನಿಮ್ಮಿಂದ ಒಂದು ಉಪಕಾರವಾಗಬೇಕಿತ್ತು’ ನನ್ನವಳು ನನ್ನನ್ನು ಬೈಪಾಸ್ ಮಾಡಿದಳು.

‘ಆಮ್ಲಜನಕ, ಆಂಬುಲೆನ್ಸ್, ಆಸ್ಪತ್ರೇಲಿ ಮಂಚ ಮೂರು ಹೊರತುಪಡಿಸಿ ಏನಾದ್ರೂ ಕೇಳಬಹುದು’ ಎಂದ.

‘ಅಯ್ಯೋ ಅಷ್ಟು ದೊಡ್ಡ ತುರ್ತು ಇಲ್ಲ, ಕೇವಲ ಕನ್ನಡಕವಷ್ಟೇ. ಅದಿಲ್ಲದೇ ಅಡುಗೆಮನೆಯಲ್ಲಿ ಕೊಂಚ ಅನಾಹುತ’.

‘ಹಾಗಿದ್ರೆ ಮರೆತುಬಿಡಿ, ನಾನು ವ್ಯವಸ್ಥೆ ಮಾಡ್ತೀನಿ’ ಎಂದ.

‘ಫ್ರೆಶ್ ಡಿಕಾಕ್ಷನ್ ಕಾಫಿ ತಂದೆ, ಕುಡಿದು ಹತ್ತರ ಒಳಗೆ ಮನೆ ಸೇರ್ಕೊಳ್ಳಿ’ ಕ್ಷಣಾರ್ಧದಲ್ಲಿ ಬಿಸಿಯಾಡುವ ಕಾಫಿ ಕಂಠಿಯ ಕೈಯಲ್ಲಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು