ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಅತಿಥಿ!

Last Updated 9 ಜುಲೈ 2020, 19:31 IST
ಅಕ್ಷರ ಗಾತ್ರ

‘ಏನಯ್ಯ ತೆಪರೇಸಿ, ಎಲ್ಲಿ ನಾಪತ್ತೆಯಾಗಿದ್ದೆ ಇಷ್ಟ್ ದಿನ?’

‘ಸರ್ಕಾರದ ಗೆಸ್ಟ್ ಆಗಿ ಹೋಗಿದ್ದೆ ಸಾ. ಹದಿನೈದು ದಿನದ ಕಾರ್ಯಕ್ರಮ ಇತ್ತು’.

‘ಏನು? ಸರ್ಕಾರದ ಗೆಸ್ಟ್ ಆಗಿದ್ಯಾ? ಅಂಥದ್ದೇನು ದಬಾಕಿದ್ದೆ ನೀನು?’

‘ಅದೇನೋ ಬರುವಾಗ ಒದ್‍ಕಂಡು ಬರುತ್ತೆ ಅಂತಾರಲ್ಲ ಸಾ... ಹಂಗೆ. ನನ್ ಮನೆ ಬಾಗಿಲಿಗೇ ಅಧಿಕಾರಿಗಳು ಬಂದು ಮರ್ಯಾದೆ ಕೊಟ್ಟು ಕರ್ಕಂಡ್ ಹೋದ್ರು. ಉಳ್ಕೊಳ್ಳೋಕೆ ಸ್ಪೆಷಲ್ ರೂಮು, ಬೇಕ್ ಬೇಕಾದ ಊಟ, ತಿಂಡಿ ಕಳಿಸಿಕೊಡೋರು. ಬೆಳಿಗ್ಗೆ, ಸಾಯಂಕಾಲ ಫೋನ್ ಮಾಡಿ ಮುಖ್ಯಸ್ಥರೇ ವಿಚಾರಿಸಿಕೊಳ್ತಿದ್ರು. ಹೇಗಿದೀರಿ? ಏನಾದ್ರೂ ಬೇಕಿದ್ರೆ ತರಿಸ್ಕೊಳಿ. ನೀವು ನಮ್ಮ ಗೆಸ್ಟು. ನಿಮ್ಮನ್ನ ತುಂಬಾ ಚೆನ್ನಾಗಿ ನೋಡ್ಕೋಬೇಕು ಅಂತಿದ್ರು ಸಾ’.

‘ಹೌದಾ? ಸ್ಕೂಲಲ್ಲಿ ಓದುವಾಗ ನಿನ್ನ ವೇಸ್ಟ್ ಬಾಡಿ ಅಂತಿದ್ದೆ. ಈಗ ಯಾವ ಲೆವೆಲ್ಲಿಗೆ ಬೆಳೆದುಬಿಟ್ಟಿದೀಯ ಏನ್ಕತೆ... ಅದಿರ‍್ಲಿ, ಏನ್ ಕಾರ್ಯಕ್ರಮ ಅದು?’

‘ಅದು ದೊಡ್ ಕತೆ ಸಾ, ಈಗ ಹೇಳೋಕಾಗಲ್ಲ. ವಾಪಸ್ ಬರೋವಾಗ ತಲೆ ಮೇಲೆಲ್ಲ ಹೂವು ಹಾಕಿ, ಸನ್ಮಾನ ಮಾಡಿ ಕಳಿಸಿಕೊಟ್ರು. ಪೇಪರ್‍ನೋರು ಟೀವಿಯೋರೆಲ್ಲ ಇಂಟ್ರೂ ಮಾಡಿದ್ರು ಸಾ...’

‘ಹೌದಾ? ಅಂಥ ಸಾಧನೆ ಏನಯ್ಯ ಮಾಡಿದ್ದೆ ನೀನು? ನಂಗೂ ಹೇಳಲ್ವ?’

‘ಬ್ಯಾಡ ಬಿಡಿ ಸಾ... ನಿಮಗ್ಯಾಕೆ ಅದೆಲ್ಲ...’

‘ಎಂಥ ಸ್ವಾರ್ಥಿನಯ್ಯ ನೀನು. ಶಿಷ್ಯನಾಗಿ ಅಂಥ ಸನ್ಮಾನ, ಪುರಸ್ಕಾರಾನ ಗುರುವಾದ ನನಗೂ ಕೊಡಿಸ್ಬೇಕು ಅಂತ ಅನ್ಸಲ್ವ ನಿಂಗೆ?’

‘ಬ್ಯಾಡ ಸಾ, ಅದು ತಾನಾಗೇ ಬರ್ಬೇಕು. ಮೇಲಾಗಿ ನಿಮಗೆ ವಯಸ್ಸಾಗಿದೆ...’

‘ವಯಸ್ಸಾದ್ರೆ? ನಂಗೆ ಅದೆಲ್ಲ ಗೊತ್ತಿಲ್ಲ, ಅಂಥ ದೊಡ್ಡ ಗೌರವ, ಸನ್ಮಾನ ನಂಗೂ ಸಿಗಬೇಕು. ನೀನು ಹೇಗೆ ಸೆಲೆಕ್ಟ್ ಆದೆ, ಎಲ್ಲಿದ್ದೆ ಹೇಳು’ ಗುರುಗಳು ಪಟ್ಟು ಹಿಡಿದರು.

‘ಎಲ್ಲಿದ್ದೆ ಅಂತ ಹೇಳ್ಲೇಬೇಕಾ ಸಾ...?’

‘ಹೌದು, ಹೇಳ್ಲೇಬೇಕು...’

‘ಕ್ವಾರಂಟೈನ್‍ನಲ್ಲಿದ್ದೆ!’

ಗುರುಗಳು ಮೂರ್ಛೆ ಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT