ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಹಿಂದಿ ಹುಕುಂ

Last Updated 24 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

‘ನೋಡು, ಆಫೀಸ್ ಚಾಲೂ ಆಗೈತಿ, ಮಾಸ್ಕ್ ಹಾಕ್ಕೊಂಡ್ರ ಮಾರಿ ಛಂದ ಕಾಣಂಗಿಲ್ಲ ಅಂತ ಹಂಗೇ ಹೋಗಬ್ಯಾಡ ಮತ್ತ. ಎಲ್ಲೇ ಹೋಗೂದಿದ್ದರೂ ಮಾಸ್ಕ್ ಹಾಕ್ಯಂಡು, ಕೈಯಾಗ ಸ್ಯಾನಿಟೈಸರ್ ಹಿಡಿದೇ ಹೋಗಬಕು’ ಬೆಳಬೆಳಗ್ಗೆಯೇ ಬೆಕ್ಕಣ್ಣ ವಟವಟ ನಡೆಸಿತ್ತು. ಫೋನಿನ ರಿಂಗ್ ಟೋನಿನ ಹಂಗೆ ಹೇಳಿದ್ದೇ ಹೇಳೂ ಈ ಕಿಸಬಾಯಿದಾಸನತ್ತ ಗಮನ ಕೊಡದೇ ಸುಮ್ಮನಿದ್ದೆ.

‘ಹೇಳಿದ್ದು ಕೇಳಿಸ್ತಿಲ್ಲೋ... ದೊಡ್ಡೋರು ಬುದ್ಧಿಮಾತು ಹೇಳಿದ್ದನ್ನು ಗೌರವದಿಂದ ಪಾಲಿಸಬೇಕು. ಏ ಹಮಾರಾ ರಿವಾಜ್ ಹೈ. ಸಮಜೋ’ ಎಂದು ಮತ್ತೆ ಗುರಗುಟ್ಟಿತು.

‘ಏನಲೇ... ಹಿಂದಿವಳಗ ಭಾರೀ ಡಯಲಾಗ್ ಹೊಡೆಯಾಕಹತ್ತೀಯಲ್ಲ. ಅದೇನೋ ಹಮಾರಾ ಅಂದ್ಯಲ್ಲ ನನಗ ತಿಳೀಲಿಲ್ಲ’ ನಾನು ಕಿಚಾಯಿಸಿದೆ.

‘ಹಿಂದಿ ಬರದಿದ್ದರ ಮನಿಯಿಂದ ಹೊರಗ ಹೋಗು, ಏಕ್ ದೇಶ್, ಏಕ್ ಆವಾಜ್... ಏ ಹಮಾರಾ ಹುಕುಂ ಹೈ’ ಎಂದು ನನ್ನ ಮನೆಯಲ್ಲಿ ನನಗೇ ದಬಾಯಿಸಿತು.

‘ಬಪ್ಪರೇ ಮಗನೇ... ನಾ ಯಾಕ ಹೊರಗ ಹೋಗಲಿ? ನೀ ಏನ್ ದೊಡ್ಡ ಮಾರಾಜ, ನನಗ ಅಪ್ಪಣೆ ಮಾಡಾಕ’ ನಾನೂ ಜೋರು ಮಾಡಿದೆ.

‘ಹಿಂದಿ ಬರಂಗಿಲ್ಲ ನಿನಗ ಅಂದ್ರ ಮತ್ತ ನೀ ಯಾವ ಸೀಮೆ ಭಾರತೀಯಳಿದ್ದಿ? ಈಗ ಬರೇ ವೋಟರ್ ಕಾರ್ಡು, ಆಧಾರ್ ಕಾರ್ಡು, ಜನನ ಪ್ರಮಾಣಪತ್ರ ಇಂತವೆಲ್ಲ ಇಂಟ್ಕಂಡ್ರೆ ಮುಗಿಯಂಗಿಲ್ಲ. ನಾಳೆ ಪೌರತ್ವ ರುಜುವಾತು ಮಾಡಬಕು ಅಂದ್ರ ಛಲೋತ್ನಾಗಿ ಹಿಂದಿ ಮಾತಾಡಬಕು, ಓದಾಕೆ ಬರೆಯಾಕೆ ಒಂದಿಷ್ಟಾದರೂ ಬರಬಕು. ನೋಡ್... ಅದಕ್ಕೇ ನಾ ಹಿಂದಿ ಕಲಿಯಾಕ ಹತ್ತೇನಿ’ ಎಂದು ಬಗಲಲ್ಲಿದ್ದ ಹಿಂದಿ ಶಬ್ದಕೋಶ ತೋರಿಸಿತು.

‘ಹೌದನು... ಆದ್ರ ಹಾಲು ಹಾಕ್ತೀನಿ ಬಾ ಅಂತ ಹಿಂದಿವಳಗ ಅನ್ನಾಕ ನನಗ ಬರಂಗಿಲ್ಲ, ಹಿಂಗಾಗಿ ನಾ ಹಾಕಂಗಿಲ್ಲ’ ಎಂದೆ.‌

‘ಉಣ್ಣೂದು ಮಾತ್ರ ಮಾತೃಭಾಷೆವಳಗನ... ಅದಕ್ಯಾಕೆ ಹಿಂದಿ ಬೇಕು? ಕನ್ನಡದ ಹಾಲೇ ಸಾಕು’ ಎಂದು ಮೆತ್ತಗೆ ಉಲಿಯುತ್ತ ಹಾಲಿನ ಬಟ್ಟಲಿನತ್ತ ಓಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT