ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಅಕ್ರಮವೇ ಸಕ್ರಮ

Last Updated 24 ಅಕ್ಟೋಬರ್ 2021, 19:12 IST
ಅಕ್ಷರ ಗಾತ್ರ

ಬೆಕ್ಕಣ್ಣ ಬೆಳಗ್ಗೆ ಬೆಳಗ್ಗೆಯೇ ರಸಪ್ರಶ್ನೆಯ ಲಹರಿಯಲ್ಲಿತ್ತು. ‘ಶಾಸಕರು, ಸಚಿವರು, ಸಂಸದರು ಇವ್ರೆಲ್ಲ ಯಾರು?’

‘ಜನಪ್ರತಿನಿಧಿಗಳು’ ನನ್ನ ಒಂದೇ ಪದದ ಉತ್ತರ.

‘ಸರಿ, ಇವ್ರು ಎದಕ್ಕೆ ಜನಪ್ರತಿನಿಧಿ ಆಗ್ಯಾರ’ ಕೇಳಿದ ಬೆಕ್ಕಣ್ಣ ತಾನೇ ಉತ್ತರವನ್ನೂ ಕೊಟ್ಟುಕೊಂಡಿತು, ‘ಸರ್ಕಾರ ಮಾಡಾಕೆ, ಸರ್ಕಾರ ನಡೆಸಾಕೆ ಹೌದಿಲ್ಲೋ’ ಎಂದಿತು. ಕೋಲೆಬಸವನಂತೆ ತಲೆ ಅಲ್ಲಾಡಿಸಿದೆ.

‘ಅಂದ್ರ ಈ ಜನಪ್ರತಿನಿಧಿಗಳೇ ಸರ್ಕಾರ ಹೌದಿಲ್ಲೋ’ ಎಂದು ಮತ್ತೆ ಪಾಟಿಸವಾಲು ಮಾಡಿತು. ಪೆಕರಳಂತೆ ಅದಕ್ಕೂ ಹ್ಞೂಂಗುಟ್ಟಿದೆ.

ನಮ್ಮ ಶಾಸಕರಂದ್ರ ಅವರವರ ಕ್ಷೇತ್ರದಾಗ ಅವರೇ ಸರ್ಕಾರ ಇದ್ದಂಗೆ, ಅವರು ಸರ್ಕಾರದ ಜಮೀನು ಒಂದೀಟು ತಗಂಡು ಬಂಗಲೆ ಕಟ್ಟಿದರ ಏನು ತಪ್ಪಾತು... ಅದನ್ನೇನು ಅತಿಕ್ರಮಿಸ್ಯಾರ, ಗುಳುಂ ಮಾಡ್ಯಾರ ಅಂತೆಲ್ಲ ಹೇಳೂದು? ಅಂದ್ರ ಇದು ಸರ್ಕಾರನೇ ಸರ್ಕಾರಿ ಜಮೀನು ತಗಂಡಂಗೆ ಆತಿಲ್ಲೋ...’ ಪಕ್ಕಾ ಕ್ರಿಮಿನಲ್ ಲಾಯರಿಕಿ ಧ್ವನಿಯಲ್ಲಿ ಬೆಕ್ಕಣ್ಣ ವಾದ ಮಂಡಿಸಿತು.

‘ಭಪ್ಪರೆ ಮಗನೇ... ಅಂಥಾ ಶಾಸಕರೇನಾದ್ರ ಇದನ್ನ ಕೇಳಿದ್ರೆ, ನಿನ್ನೇ ತಮ್ಮ ಮಾಧ್ಯಮ ಪ್ರತಿನಿಧಿಯಾಗಿ ಇಟ್ಟುಕೋತಾರ’ ಎಂದು ನಕ್ಕೆ.

‘ಎಷ್ಟು ಸರ್ಕಾರಿ ಜಮೀನು ಐತೋ ಅದಿಷ್ಟನ್ನೂ ಈ ಸರ್ಕಾರಿ ಸೇವಾದಾಗೆ ಜೀಂವಾ ತೇಯೂ ಜನಪ್ರತಿನಿಧಿಗಳಿಗೆ ಅವರವರ ಸೀನಿಯಾರಿಟಿ ಮೇಲೆ ಹಂಚಿಬಿಡಬೇಕು’ ಎಂದು ಇನ್ನೊಂದು ವಾದವನ್ನೂ ಮಂಡಿಸಿತು.

‘ಎಷ್ಟು ಮಂದಿ ಜನಪ್ರತಿನಿಧಿಗಳಿಗೆ ಕೊಡಾಕೆ ಆಗತೈತಲೇ... ಮಾಜಿಗಳು, ಹಾಲಿಗಳು, ಭಾವಿಗಳು ಅಂತ್ಹೇಳಿ ಎಲ್ಲಾರಿಗೂ ಹಂಚಿಕೋತ ಹೋದ್ರೆ ಸರ್ಕಾರಿ ಅಲ್ಲ, ಖಾಸಗಿ ಜಮೀನು, ಅರಣ್ಯ ಜಮೀನೂ ಸಾಲಂಗಿಲ್ಲ. ಮಂಗ್ಯಾನಂಥವನೇ’ ಎಂದು ಬೈಯ್ದೆ.

‘ಅವಾಗ ಅಮೆರಿಕಾದಾಗೋ, ಸೈಬೀರಿಯಾ ದಾಗೋ ಅಥವಾ ಚಂದ್ರಲೋಕದಾಗೋ ಇನ್ನೊಂದಿಷ್ಟು ಜಾಗಾನ ಸರ್ಕಾರನೇ ಖರೀದಿಸಿ ಹಂಚಿದ್ರಾತು. ಅಷ್ಟು ಕಷ್ಟಪಟ್ಟು ಜನಸೇವೆ ಮಾಡೂ ಜನಪ್ರತಿನಿಧಿಗಳಿಗೆ ವಿಶೇಷ ‘ಅಕ್ರಮವೇ ಸಕ್ರಮ’ ಯೋಜನೆ ಜಾರಿ ಮಾಡಬಕು’ ಬೆಕ್ಕಣ್ಣನ ವಿತಂಡವಾದ ಎಗ್ಗಿಲ್ಲದೇ ಸಾಗಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT