‘ಏಮನ್ನ ಮೈಸೂರ್ಲೋ ಏಮಿಟದಿ ಪೆಂಡಾಲ್ ಗಲಾಟ?’ ಅಂತ ತೆಲುಗು ಚಿನ್ನಪ್ಪಯ್ಯ ವಿಚಾರಿಸಿದ.
‘ಪೆಂಡ್ಲಾಮಿಂದಲೇ ಪೆಂಡಾಲ್ ಗಲಾಟೆ ಸುರುವಾಗಿರದು ಕಯ್ಯಾ. ನೀನು ಸುಮ್ಮಗಿರು’ ಅಂದು ತುರೇಮಣೆ ಸುಮ್ಮನಿರಿಸಿದರು.
‘ಅಲ್ಲ ಕಜಾ, ಪಾದಯಾತ್ರೆ, ಸಮಾವೇಶದಲ್ಲಿ ಮೂರೂ ಪಕ್ಷದೋರು ಬೀದೀಲಿ ದೂಳು ಎರಚಿ, ಬೋದು ಶಾಪ ಇಕ್ಕಿ ಆಯಕಟ್ಟಿನ ಜಾಗಕ್ಕೇ ಹೊಡಕತ್ತಾವ್ರೆ’ ಯಂಟಪ್ಪಣ್ಣ ವಿಷಯಕ್ಕೆ ಬಂತು.
‘ಕುರಿತೇಟಾಗಿ ಏಳಿದ್ರಿ ಕನಣೈ. ಬೋಗುಳ ಬಳಸದೇ ಬೈಯ್ಯದು ಹ್ಯಂಗೆ ಅಂತ ರಾಜಕೀಯದೋರಿಗೆ ಟ್ಯೂಶನ್ ಕೊಡಬಕು ಅಂದದೆ ಬೀಜೆಪಿ ಸುರೇಶಣ್ಣ’ ಅಂತಂದೆ.
‘ಯತ್ನಾಳಣ್ಣನ ತಾವು ಮನೆ ಪಾಠಕ್ಕೋದ್ರೆ ಆಗೂದಿಲ್ವೆ? ಯಾಕೋ ಅದೂ ಪಾದಯಾತ್ರೆ ಮಾಡ್ತೀನಿ ಅಂದದೆ’ ಯಂಟಪ್ಪಣ್ಣ ಕೇಳಿತು.
‘ಬೋದಾಡದೂ ಅನಾರೋಗ್ಯದ ಲಕ್ಷಣ ಕನ್ರೋ. ರಾಜಕಾರಣಿಗಳೆಲ್ಲಾ ಬಾಯಿಗೆ ಫಿಲ್ಟರ್ ಹಾಕಿಸಿಗ್ಯಂದು ಕೊಲೆಸ್ಟ್ರಾಲ್ ತೂಕ ಇಳಿಸಿಗ್ಯಬಕು’ ತುರೇಮಣೆ ತೂಕದ ಮಾತಾಡಿದರು.
‘ನೋಡ್ರಿ, ಮೊನ್ನೆ ನೂರು ಗ್ರಾಂ ತೂಕ ಜಾಸ್ತಿಯಾಗಿದ್ಕೆ ಒಲಿಂಪಿಕ್ಸಲ್ಲಿ ಕುಸ್ತಿ ಪದಕವೇ ತಪ್ಪೋಯ್ತು’ ಅಂದೆ ವಿಷಾದದಿಂದ.
‘ಅಧಿಕಾರ ಇಲ್ಲದಿದ್ದಾಗ ರಾಜಕಾರಣಿಗಳಿಗೆ ಕೊಲೆಸ್ಟ್ರಾಲ್ ಜಾಸ್ತಿಯಾಗಿ ದುಡ್ಡು ಸರ್ಕ್ಯುಲೇಶನ್ ಆಗದೇ ಪಿತ್ತಭ್ರಮೆಯ ರಿಸ್ಕಾಯ್ತದೆ, ವಾಯುದೇಗು ಬತ್ತದೆ, ಕಣ್ಣು ಕೆಂಪಾತವೆ. ಇವರಿಗೆಲ್ಲ ಸ್ಟುಪಿಡ್ ಪ್ರೊಫೈಲ್ ಟೆಸ್ಟ್ ಮಾಡಿಸಬಕು’ ಅಂತ ವಿವರಿಸಿದರು.
‘ಅಧಿಕಾರ ಹೋಯ್ತದೆ ಅಂದಾಗ್ಲೂ ರಾಜಕಾರಣಿಗಳಿಗೆ ಇದೇ ಮುದಿಮೋಹದ ಲಕ್ಷಣ ಕಾಣಿಸಿಗ್ಯತದೆ. ಜನಕ್ಕೆ ಕ್ರೈಗ್ಲಿಸರಾಯ್ಡ್, ಇಲಾಖೆಗಳಿಗೆ ಹೈ-ಟ್ರಾನ್ಸ್‌ಫರ್ ಫ್ಯಾಟ್ ಅನ್ನೋ ಕೆಟ್ಟ ಕೊಲೆಸ್ಟ್ರಾಲ್ ಅಮರಿಕ್ಯಂಡದೆ. ಅದನ್ನ ಪರಿಹಾರ ಮಾಡದು ಬುಟ್ಟು ಮೂಗಂಡುಗ ಮಾತಾಡ್ತವ್ರೆ’ ಚಂದ್ರು ಸಿಟ್ಟಾದ.
‘ದಿಟ ಕಯ್ಯಾ, ಇವೆಲ್ಲಾ ಆಗಬಾರದು ಅಂದ್ರೆ ಕ್ರೈಗ್ಲಿಸರಾಯ್ಡ್, ಹೈ-ಟ್ರಾನ್ಸ್‌ಫರ್ ಫ್ಯಾಟ್ ಹೈನುಗಾರಿಕೆ ಮಾಡಿದೋರಿಗೆ ಚುನಾವಣಾ ಟಿಕೇಟು ಕೊಡಬಾರದು. ಅಧಿಕಾರಕ್ಕೆ ಬರೋರಿಗೆ ಕೆಟ್ಟ ಕೊಲೆಸ್ಟ್ರಾಲ್ ಮಿತಿ ಫಿಕ್ಸ್ ಮಾಡಬಕು’ ಅಂದ್ರು ತುರೇಮಣೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.