ಬುಧವಾರ, ಸೆಪ್ಟೆಂಬರ್ 18, 2019
28 °C

ಗೌರ್ನರ್‌ಗೊಂದು ಪತ್ರ

Published:
Updated:
Prajavani

ನಮ್ಮ ರಾಜ್ಯದ ಗೌರ್ನರ್ ಸಾಹೇಬ್ರಿಗೆ ದಾವಣಗೇರಿ ಪಟ್ಟಣದ ಶಾಂತವ್ವ ದೊಡ್ಡಮನಿ ಮಾಡೋ ನಮಸ್ಕಾರಗಳು. ಸಾಹೇಬ್ರೆ ಮೊನ್ನಿ ನೀವು ಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಿದ್ದು ಟೀವ್ಯಾಗ ನೋಡಿದೆ. ಅಲ್ಲ ಸಾಹೇಬ್ರೆ ನೀವಿನ್ನೂ ಯಾವ ಕಾಲದಾಗದೀರಿ, ಏನ್ ಕತಿ ನಂಗೆ ತಿಳೀವಲ್ದು. ಕಾಲ ಬದಲಾಗೇತಿ, ಜನ, ಜಾನುವಾರು, ಶಾಸಕರು ಎಲ್ಲ ಬದಲಾಗಿದಾರೆ, ಆದ್ರೆ ನೀವಿನ್ನೂ ಅಲ್ಲೇ ಅದೀರಿ. 

ಅಲ್ಲ, ಅದ್ಯಾವ ಸೀಮೆ ಪ್ರಮಾಣ ವಚನ ನೀವು ಬೋಧಿಸಿದ್ದು? ಸಂವಿಧಾನ ಬಿಡಲ್ಲ, ಜಾತಿ ಧರ್ಮ ನೋಡಲ್ಲ, ರಾಗ ದ್ವೇಷ ಮಾಡಲ್ಲ... ಬರೀ ಇವೇ ಮಣ್ಣು ಮಸಿ... ಎಷ್ಟು ಮಂದಿ ಅದರಂಗೆ ನಡ್ಕಂಡಾರೆ? ಮಾಡೋದೆಲ್ಲ ಅನಾಚಾರ, ಗೌರ್ನರ್ ಮುಂದೆ ಬೃಂದಾವನಾನ?

ಈಗ ನಾ ಏನು ಹೇಳಾಕ ಹೊಂಟೀನಿ ಅಂದ್ರ, ನಿಮ್ಮ ಪ್ರಮಾಣ ವಚನಕ್ಕೆ ತಿದ್ದುಪಡಿ ಆಗಬೇಕು. ಇದು ಅಗದೀ ಸೀರಿಯಸ್ ವಿಷಯ. ಯಾರೇ ಆಗ್ಲಿ ಪ್ರಮಾಣ ವಚನ ತಗಂಡೋರು ಅದರಂಗೆ ನಡ್ಕಾಬೇಕು. ಅದು ನಿಮ್ಮ ಜವಾಬ್ದಾರಿ.

ಸಾಹೇಬ್ರೆ ನೀವು ಈ ರಾಜಕೀಯ ನಾಟಕ, ಬಯಲಾಟ ಎಲ್ಲ ನೋಡಿದೀರಿ. ಎಲ್ಲ ಪಕ್ಷಗಳೂ ಅಷ್ಟೆ, ಸೆಗಣಿ ಮೂರು ಗುಂಪು. ಅದ್ಕೆ ಇನ್ನು ಮುಂದೆ ಶಾಸಕರು ಹೊಸ ರೀತಿ ಪ್ರಮಾಣ ಮಾಡಬೇಕು. ಏನು, ಹೆಂಗೆ ಹೇಳ್ತೀನಿ ಕೇಳ್ರಿ...

‘ನಾನು ಇಂಥ ಶಾಸಕ, ಈಗ ಮಂತ್ರಿ ಆಗ್ತಿದ್ದು, ಈ ಅವಧಿ ಮುಗಿಯೋತನ ಇದೇ ಪಕ್ಷದಾಗೆ ಇರ್ತೀನಿ ಎಂದು...
ತಾಳಿ ಕಟ್ಟಿದ ಪಕ್ಷ ಬಿಟ್ಟು ಬೇರೆಯವರ ಜೊತಿ ಸಂಸಾರ ಮಾಡಲ್ಲ ಎಂದು...
ರಾತ್ರೋರಾತ್ರಿ ಓಡಿ ಹೋಗಿ ರೆಸಾರ್ಟ್ ಸೇರ್ಕಳಲ್ಲ, ಆಪರೇಶನ್ ಮಾಡಿಸ್ಕಳಲ್ಲ ಎಂದು...
ದುಡ್ಡಿಗಾಗಿ, ಅಧಿಕಾರಕ್ಕಾಗಿ ನನ್ನನ್ನು ಮಾರ್ಕಂಡು ಮತ ಹಾಕಿದೋರ ಬಾಯಿಗೆ ಮಣ್ಣು ಹಾಕಲ್ಲ ಎಂದು...
ಅತೃಪ್ತರು, ಅನರ್ಹರು, ಅಯೋಗ್ಯರು ಅಂತ ಛೀ ಥೂ ಅಂತ ಉಗಿಸ್ಕಳಲ್ಲ ಎಂದು...
ದೇವರ ಹೆಸರಲ್ಲಿ, ಮತದಾರರ ಹೆಸರಲ್ಲಿ ಪ್ರಮಾಣ ಮಾಡ್ತೀನಿ ಅಂತ ಅವರ ಬಾಯಾಗೆ ಹೇಳಿಸ್ಬೇಕು. ಇದಕ್ಕೆ ತಪ್ಪಿ ನಡೆದ್ರೆ ಅವರ ಶಾಸಕ ಸ್ಥಾನ ಆಟೋಮೆಟಿಕ್ ಆಗಿ ವಜಾ ಆಗ್ಬೇಕು. ಸರೀನಾ? ಮಾಡ್ತೀರಾ? ನಮಸ್ಕಾರ...

Post Comments (+)