ಬುಧವಾರ, ಡಿಸೆಂಬರ್ 8, 2021
28 °C

ಚುರುಮುರಿ | ಹಾಸಿಗೆ ಇದ್ದಷ್ಟು...

ಸಿ.ಎನ್‌.ರಾಜು Updated:

ಅಕ್ಷರ ಗಾತ್ರ : | |

‘ಕೊರೊನಾ ಗೆದ್ದು ಪದ್ಮಾ ಆಸ್ಪತ್ರೆಯಿಂದ ಮನೆಗೆ ಬಂದಿದ್ದಾಳೆ. ಬ್ರೆಡ್ಡು, ಬಾಳೆಹಣ್ಣು ತಗೊಂಡು ಹೋಗಿ ಕೊಟ್ಟು ಮಾತನಾಡಿಸಿಕೊಂಡು ಬರೋಣ, ನಮ್ಮ ಮಗಳ ಬರ್ತ್‌ಡೇಗೆ ನೂರು ರೂಪಾಯಿ ಮುಯ್ಯಿ ಕೊಟ್ಟಿದ್ದಳು, ಮುಯ್ಯಿ ಋಣ ತೀರಲಿ’ ಎಂದು ಅನು, ಗಂಡ ಗಿರಿಯನ್ನು ಕರಕೊಂಡು ಬಂದಿದ್ದಳು.

ಸೋಂಕು ತಗುಲಿದ್ದ ಪದ್ಮಾಳಿಗಿಂತ ಅವಳ ಗಂಡ ಪರಮೇಶಿನೇ ಹೆಚ್ಚು ಸೊರಗಿದ್ದ.

‘ಆಸ್ಪತ್ರೆ ಖರ್ಚು ಲಕ್ಷಗಟ್ಟಲೆ ಆಯ್ತು...’ ಪರಮೇಶಿ ನಿಟ್ಟುಸಿರುಬಿಟ್ಟ.

‘ಉಚಿತ ಸೇವೆಯ ಸರ್ಕಾರಿ ಆಸ್ಪತ್ರೆಗೆ ಸೇರಿಸಬೇಕಾಗಿತ್ತು’ ಅನು ಹೇಳಿದಳು.

‘ಸರ್ಕಾರಿ ಆಸ್ಪತ್ರೆಗಳು ಹೌಸ್‍ಫುಲ್ ಆಗಿ ಹಾಸಿಗೆ ಖಾಲಿ ಇರಲಿಲ್ಲರೀ’ ಪದ್ಮಾ ಪರಿಸ್ಥಿತಿ ಹೇಳಿದಳು.

‘ದಿನಕ್ಕೆ ಸಾವಿರಗಟ್ಟಲೆ ಕೊರೊನಾ ಕೇಸ್ ಕಾಣಿಸಿಕೊಂಡರೆ ಆಸ್ಪತ್ರೆಯವರು ಎಷ್ಟೂಂತ ಹಾಸಿಗೆ ಹೊಂಚುತ್ತಾರೆ? ಮನೆಗೆ ನಾಲ್ಕು ಜನ ಗೆಸ್ಟ್ ಎಕ್ಸ್‌ಟ್ರಾ ಬಂದ್ರೆ ಅವರಿಗೆ ಹಾಸಿಗೆ ಹೊಂದಿಸಲು ನಾವೇ ಪರದಾಡ್ತೀವಿ’ ಅಂದ ಗಿರಿ.

‘ಇನ್ಮೇಲೆ ಪೇಷೆಂಟ್‍ಗಳೇ ಹಾಸಿಗೆ ತಗೊಂಡು ಹೋಗಿ ಆಸ್ಪತ್ರೆಗೆ ಅಡ್ಮಿಟ್ ಆಗ್ಬೇಕಾಗುತ್ತೇನೋ’ ಎಂದಳು ಅನು.

‘ಹೊರಗಿನ ಹಾಸಿಗೆಗಳನ್ನು ಆಸ್ಪತ್ರೆ
ಯವರು ಅಲೋ ಮಾಡೊಲ್ಲ ಕಣ್ರೀ, ಅವರ ಹಾಸಿಗೆಯಲ್ಲೇ ಮಲಗಬೇಕಂತೆ. ಅಗತ್ಯಬಿದ್ದರೆ ಡಾಕ್ಟರ್ ಮನೆಯಲ್ಲಿರುವ ಹಾಸಿಗೆಗಳನ್ನ ತಂದು ಹಾಸಿ ರೋಗಿಗಳನ್ನು ಮಲಗಿಸಿ ಟ್ರೀಟ್‍ಮೆಂಟ್ ಕೊಡ್ತಾರಂತೆ’ ಪದ್ಮಾ ಹೇಳಿದಳು.

‘ದುಡ್ಡಿನ ದೊಡ್ಡ ಆಸ್ಪತ್ರೆಯ ಹಾಸಿಗೆಗೆ ಆಸೆಪಡಬಾರದು, ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು’ ಗಿರಿ ಬುದ್ಧಿ ಹೇಳಿದ.

‘ಆಸ್ಪತ್ರೆಗಳಲ್ಲಿ ಈಗ ಕೊರೊನಾ ಬಿಟ್ಟರೆ ಬೇರೆ ಕಾಯಿಲೆ ವ್ಯವಹಾರ ಇಲ್ಲವಂತೆ. ಅದಕ್ಕೇ ಸಾಮಾನ್ಯ ಆಸ್ಪತ್ರೆಗಳೆಲ್ಲಾ ಕೋವಿಡ್ ಕೇರ್ ಸೆಂಟರ್‌ಗಳಾಗಿ ಮಾರ್ಪಾಡಾಗುತ್ತಿವೆ, ತಮ್ಮ ಶಕ್ತ್ಯಾನುಸಾರ ಹಾಸಿಗೆಗಳನ್ನು ಹಾಸಿಕೊಂಡು ಹಾಸಿಗೆ ಇದ್ದಷ್ಟು ಕಾಸು ಬಾಚಬೇಕು ಅಂದುಕೊಂಡಿದ್ದಾರೆ, ಅವರೂ ಬದುಕಬೇಕಲ್ವೆ ಪಾಪ!...’ ಪದ್ಮಾ ಕಾಫಿ ತಂದುಕೊಟ್ಟಳು.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.