ಗುರುವಾರ , ಜನವರಿ 23, 2020
28 °C

ವಿಡಂಬನೆ: ಸಂಕ್ರಾಂತಿ ಫಲಾಫಲ

ಲಿಂಗರಾಜು ಡಿ.ಎಸ್. Updated:

ಅಕ್ಷರ ಗಾತ್ರ : | |

Prajavani

ವಿಕಾರಿನಾಮದ ನಿರುತ್ತರಾಯಣ ಪುಣ್ಯಕಾಲದಲ್ಲಿ ಸಂ-ಕ್ರಾಂತಿ ಪುರುಷನು ಜನತೆಗೆ ನಮೋ ಎಂದು ಕೈಮುಗಿಯುತ್ತಾ ಗೂಳಿ ವಾಹನದಲ್ಲಿ ಶಾ-ರಥಿಯೊಂದಿಗೆ ದಿಲ್ಲಿಯತ್ತ ಹೊರಟು ಈಶಾನ್ಯದ ಕಡೆಗೆ ನೋಡುತ್ತಿದ್ದಾನೆ. ಕೈಯಲ್ಲಿ ತ್ರಿಶೂಲವನ್ನೂ ತ್ರಿವರ್ಣ ಧ್ವಜವನ್ನೂ ಆಧಾರ್ ಕಾರ್ಡನ್ನೂ ಹಿಡಿದು ಕಾಶ್ಮೀರಿ ಟೋಪಿಯನ್ನು ಧರಿಸಿದ್ದಾನೆ. ಇದರಿಂದ ಭಾರತ ವಿರೋಧಿಗಳಿಗೆ ಕೃಷ್ಣ ಜನ್ಮಸ್ಥಾನ ದರ್ಶನ ಭಾಗ್ಯ. ಉಗ್ರರ ನಿಗ್ರಹ. ಜನರಿಗೆ ಆಶ್ವಾಸನೆಗಳ ಕೊಡುಗೆ! ಪೌರತ್ವಕ್ಕೆ ಆಧಾರವಿಲ್ಲದವರಿಂದ ಬಾದರಾಯಣ!

ಸಂ-ಕ್ರಾಂತಿ ಪುರುಷನು ನೋಟಿನ ಹಾರವನ್ನು ಧರಿಸಿರುವುದರಿಂದ ಶ್ರೀಸಾಮಾನ್ಯರ ಕೈಲಾಸ್ ಆಗುವ ಸಂಭವ. ಚಿನ್ನ-ಬೆಳ್ಳಿಗಳ ಬೆಲೆ ತೇಜಿಯಾಗಲಿದೆ. ತೈಲೇಂದ್ರರಿಂದ ತೈಲಬೆಲೆ ಏರಿ ಕಾಸುಖೋತಾ, ವಾರ್‍ಮೋಡ! ವಿರೋಧಪಕ್ಷದ ಕಾಂಗಿಗಳು ಮೂರು ವರ್ಷ ನಿಷ್ಠುರ ಮಾತು ಮತ್ತು ಜಗಳ ಮಾಡದಿರುವುದು ಲೇಸು.

ಕರ್ನಾಟಕದಲ್ಲಿ ಬಕರ ಸಂಕ್ರಾಂತಿಯ ಪರಿಣಾಮವಾಗಿ ಗ್ರಾಂಟುಗಳು ಬಾರದೇ ಶೋಕ ಸಂಭವ. ಪ್ರಮುಖರಿಗೆ ಸಾಡೆಸಾತಿಗಳ ಕಾಟ. ಮಂತ್ರಿ ಪದವಿಗೆ ಕಾಯ್ದ ತ್ಯಾಗಜೀವಿಗಳು ತೂಕಡಿಸಿ ಮೂಲವ್ಯಾಧಿ ಸಾಧ್ಯತೆ. ಗಡುವು ಕೊಟ್ಟಲ್ಲಿ ಮೂಲದೇವತೆಗಳಿಗೆ ಕೋಪ. ಗ್ರಹ ಶಾಂತಿಗಾಗಿ ನಮೋ ಭಜನೆ ಸೂಕ್ತ. ಕ್ಷೇತ್ರ ದರ್ಶನದಿಂದ ಮಾನಸಿಕ ನೆಮ್ಮದಿ! ಸಂಪುಟದಲ್ಲಿ ಸೋಮಾರಿಗಳಿಗೆ ಸ್ಥಾನಪಲ್ಲಟ ಸಂಭವ. ವಿರೋಧ ಪಕ್ಷಗಳು ಬಾಯಿಬೀಗ ಹಾಕಿಕೊಂಡಲ್ಲಿ ಮತ್ತೊಮ್ಮೆ ಕೂಡಿಕೆ ಸಾಧ್ಯತೆ. ದೇವ-ದೇವೀ ಪೂಜೆಯಿಂದ ಆತ್ಮವಿಶ್ವಾಸ. ರಾಜಕೀಯ ಆರೋಗ್ಯಕ್ಕೆ ಕ್ಷೇತ್ರದಲ್ಲಿ ಶಾಸಕರಿಂದ ಶ್ರಮದಾನ ಉತ್ತಮ. ಜನಸೇವಕರಿಗೆ ಅಧಿಕಸ್ಯ ಅನೃತಂ ವಿಷಂ.

ಅನಿಷ್ಟಗಳೆಲ್ಲಾ ಜನಸಾಮಾನ್ಯರ ಪಾಲು. ಸದಾ ರಸ್ತೆಗುಂಡಿ ಕಾಮಗಾರಿ ಕಾರಣ ಸ್ಥಳೀಯ ಆಡಳಿತಗಳಿಗೆ ಧನಲಾಭ. ಮುಚ್ಚದ ಗುಂಡಿಗಳಿಗೆ ಬಿದ್ದು ಜನಸಂಖ್ಯಾ ನಿಯಂತ್ರಣ. ದಿನಸಿ ಬೆಲೆ ಏರಿಕೆಯ ಕಾರಣ ಜನರಿಗೆ ಅರೆಹೊಟ್ಟೆ, ಲಂಘನಂ ಪರಮೌಷಧಂ. ಡಿಜಿಟಲ್ ಕಳ್ಳರಿಂದ ನಿದ್ರಾನಾಶ. ಸ್ವಂತ ವಾಹನಗಳಿಂದ ಟೋಲುಗಳಲ್ಲಿ ಧನನಾಶ, ನಟರಾಜನ ಮೊರೆ ಹೋಗುವುದರಿಂದ ಆರೋಗ್ಯ ಭಾಗ್ಯ. ದೇವತೆಗಳು ರಜಾಕಾಲದಲ್ಲಿರುವುದರಿಂದ ಮಧ್ಯಮ ವರ್ಗಕ್ಕೆ ನಿರಂತರ ಬೇಗುದಿ.

ಪ್ರತಿಕ್ರಿಯಿಸಿ (+)