ಶುಕ್ರವಾರ, ಅಕ್ಟೋಬರ್ 30, 2020
24 °C

ಭಿನ್ನದನಿಗಳದೇ ತಪ್ಪು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಕ್ಕಣ್ಣನಿಗೆ ಹಳೇಸುದ್ದಿ ಓದುವುದೆಂದರೆ ಬಲು ಪ್ರೀತಿ.

‘ಕೇಳಿಲ್ಲಿ... ದೇವಜ್ಜಂಗೆ ಓಡಾಡಕ್ಕಂತ ಸರ್ಕಾರ ಬರೋಬ್ಬರಿ 60 ಲಕ್ಷದ ಕಾರು ಕೊಟ್ಟೈತಂತೆ. ಕಮಲಕ್ಕ ದಾರಿವಳಗ ಹೊಂಟಿದ್ದ ತೆನೆ ಹೊತ್ತ ತಂಗಿಗೆ ಕೇಳಿದಳಂತ, ಅಲ್ಲವಾ... ನಿಮ್ಮ ಅಜ್ಜಾರಿಗೆ ನಮ್ ಸರ್ಕಾರ ದುಬಾರಿ ಕಾರು ಕೊಡಿಸ್ಯಾದ. ಮತ್ತ ಕುಮಾರಣ್ಣ ಫೈಲು ತಗಂಡು ಬಂದ್ರ ಯೆಡ್ಯೂರಜ್ಜ ಎಲ್ಲಾರನ್ನೂ ಹೊರಗ ಕಳಿಸಿ ಛಲೋ ವಿಚಾರಿಸಿಕೊಳ್ತಾರ. ಹಂತಾದ್ರಾಗೆ ನೀ ಎದಕ್ಕ ತೆನಿ ಹೊತ್ತು ಸುಸ್ತಾಗತಿ? ತೆಲಿಮ್ಯಾಗಿನ ಹೊರೆ ಆ ಕಡೆ ಬಿಸಾಕಿ, ಜರಾ ಕುಂಡ್ರಬೇ ಅಂತ. ಹೆಂಗ ಕುಂಡ್ರೂದು... ಎಲ್ಲಾರೂ ನಮ್ಮ ‘ಕೈ’ ಬಿಟ್ಟಾರ. ಮ್ಯಾಗಿರೋವ್ರು ಕೃಷಿ, ಕಾರ್ಮಿಕ ಕಾಯ್ದೆಗೆ ಏನೇನೋ ತಿದ್ದುಪಡಿ ತಂದಾರಲ್ಲ... ಇನ್ ನಾವು ಸಣ್ಣಪುಟ್ಟ ಮಂದಿ ನಿಮ್ಮ ದೊಡ್ಡ ಮಂದಿಗೆ ಭೂಮಿ ಒಪ್ಪಿಸಿ, ಜೀತ ಮಾಡೂಣೇನು ಅಂತ ತಂಗಿ ಅತ್ತಳಂತ...’ ರಾಗವಾಗಿ ಹೇಳಿತು.

‘ಮ್ಯಾಲಿನವ್ರು ಯೆಡ್ಯೂರಜ್ಜನ ಕೈಗೆ ಬೀಗ ಜಡದಾರಂತ ಸುದ್ದಿನೂ ಐತೇನು ಅದ್ರಾಗೆ’ ನಾನು ಛೇಡಿಸಿದೆ.

‘ಮದ್ಲೆಲ್ಲ ಹಿಂಗ್ಹಿಂಗೆ ರಾಜ್ಯಭಾರ ಮಾಡಿ ಅಂತ ಸಾಮ್ರಾಟರು ಮಾಂಡಲಿಕರಿಗೆ ಅಪ್ಪಣೆ ಮಾಡತಿದ್ರಲ್ಲ, ಹಂಗ ಇದೂ... ತಪ್ಪೇನೈತಿ’ ಎಂದ ಬೆಕ್ಕಣ್ಣ ‘25 ವರ್ಷಗಳ ಹಿಂದೆ’ ಕಾಲಂ ಓದಿತು.

‘ಸರ್ವಾಧಿಕಾರಿಯಂತಿರುವ ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿನ ಲಗೂನೆ ಕಿತ್ ಹಾಕ್ರಿ. ಪಕ್ಷದಾಗೆ ದಬ್ಬಾಳಿಕೆ, ಭ್ರಷ್ಟಾಚಾರ, ಗೂಂಡಾಗಿರಿ ಜಾಸ್ತಿ ಆಗೇದಂತ ಭಿನ್ನಮತೀಯರು ಅಹಮದಾಬಾದೊಳಗ ಸಮಾವೇಶ ಮಾಡಿದ್ರಂತ. ಅಂಥವರನ್ನ ಆವಾಗೇ ಹೊರಗ ಹಾಕಿದ್ರ ಕೈ ಪಕ್ಷ ಬಲವಾಗಿರ್ತಿತ್ತು’ ಎಂದಿತು.

‘ಸರೀ ನೋಡಲೇ... ಅದು ಕಮಲಕ್ಕನ ಪಕ್ಷ. ಆವಾಗಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದವರು ನಿನ್ನ ಮೋದಿ ಮಾಮ’ ನಾನು ಬೈಯುತ್ತಿದ್ದಂತೆ ‘ಹಂಗಾರೆ ಭಿನ್ನಮತೀಯರದ್ದೇ ತಪ್ಪು! ಆವಾಗಿಂದ ಸರ್ವ ಅಧಿಕಾರ ಚಲಾಯಿಸಿದ್ದಕ್ಕೇ ಇವತ್ ಇಷ್ಟ್ ದೊಡ್ಡ ಪ್ರಧಾನಿ ಆಗ್ಯಾರ’ ಎಂದು ವಕ್ರನಗು ಬೀರಿ ಸಮರ್ಥಿಸಿಕೊಂಡಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.