ಚುರುಮುರಿ: ಪಾರ್ಟಿ ತಲಾಶ್

ಸಮಾಜಸೇವೆ ಮಾಡಲು ಹೊರಟಿರುವ ದೋಸ್ತ್ ಚಂದ್ರಿ ಯಾವುದಾದರೂ ಪೊಲಿಟಿಕಲ್ ಪಾರ್ಟಿ ಸೇರಲು ಹೊರಟಿದ್ದಾನೆ. ‘ಯಾವುದಾದರೂ ಪಾರ್ಟಿ ಸೇರಿದೆಯೇನು?’ ಎಂದು ಕೇಳಿದೆ.
‘ಯುವ ನಾಯಕ ಅಧ್ಯಕ್ಷನಾಗಲಿರುವ ಕಾಂಗ್ರೆಸ್ ಸೇರುವ ಅಂತ ಹೊರಟೆ...’ ಎಂದಾಗ ನಾನು ‘ಭಲೇ ಧೈರ್ಯ ನಿನ್ನದು ಮಗನೆ’ ಎಂದೆ.
‘ಮೊನ್ನೆ ಕಾಂಗ್ರೆಸ್ ಆಫೀಸಾಗೆ ಹೋಗಿ ‘ನಾನು ಮೆಂಬರ್ ಆಗಿ ರಾಹುಲ್‍ಜಿ ಅವರ ಕೈ ಬಲಪಡಿಸಬೇಕಾಗಿದೆ. ಅದಕ್ಕೇನು ಮಾಡಬೇಕು ಹೇಳ್ರೀ’ ಎಂದು ಕೇಳಿದಾಗ ಅವರು, ‘ಮೊದಲು ಪಾರ್ಟಿ ಮೆಂಬರ್‌ಶಿಪ್ ಪಡ್ಕೊಳ್ಳಿ’ ಅಂತ ಹೇಳಿ ಅರ್ಜಿ ಕೊಟ್ಟರು’.
‘ಹಿಂದೆಲ್ಲಾ ಒಂದಿಷ್ಟು ದುಡ್ಡು ಕೊಟ್ಟರೆ ರಶೀದಿ ಕೊಡ್ತಾ ಇದ್ರು. ಅಥವಾ ಯಾರೋ ದುಡ್ಡು ಕೊಟ್ಟು ಯಾರನ್ನೋ ಮೆಂಬರ್ ಮಾಡ್ತಾ ಇದ್ರು. ಈಗ ರಾಹುಲ್‍ಜಿ ಅದನ್ನೆಲ್ಲಾ ಬದಲಿಸಲು ಹೊರಟಿದ್ದಾರೆ. ಈಗ ಮೆಂಬರ್ ಆಗೋರಿಗೆ 10 ಕಂಡೀಷನ್‌ಗಳಿವೆ. ಗುಂಡು ಹಾಕಬಾರದು ಮತ್ತು ಡ್ರಗ್ಸ್ ಸೇವಿಸಬಾರದು. ಡ್ರಗ್ಸ್ ನಾನು ಮುಟ್ಟಲ್ಲ. ಆದರೆ ಗುಂಡು ಹಾಕಬೇಡ ಅಂದರೆ ಹೇಗೆ?’ ಎಂದು ಮೊದಲ ಅಸಮಾಧಾನವನ್ನು ಪ್ರಕಟಿಸಿದ.
‘ಆಸ್ತಿ ಕಾನೂನಿನ ಇತಿಮಿತಿಯಲ್ಲೇ ಇರಬೇಕಂತೆ’ ಎಂದ. ‘ರಾಜಕಾರಣಕ್ಕಿಳಿದು ಸಮಾಜಸೇವೆ ಮಾಡಬೇಕಾದರೆ ಆಸ್ತಿ ಕಾನೂನಿನ ಇತಿಮಿತಿಯಲ್ಲೇ ಇರಲು ಹೇಗೆ ಸಾಧ್ಯ?’ ಎಂದು ಕೇಳಿದೆ.
‘ಅದೇ ನನ್ನ ಪ್ರಶ್ನೆ. ಈಗಾಗಲೇ ಮೆಂಬರ್ ಆಗಿರೋರಿಗೆ ಈ ಕಂಡೀಷನ್ ಅನ್ವಯಿಸದು. ಅವರೆಲ್ಲ ಬಚಾವ್. ನಮ್ಮಂತಹ ಹೊಸಬರಿಗೆ ಈ ನಿಯಮ. ಆಮೇಲೆ ಶ್ರಮದಾನ ಮಾಡಲು ತಯಾರಿರಬೇಕಂತೆ. ಟೀವಿ ಕ್ಯಾಮೆರಾಗಳ ಮುಂದೆ ಒಂದಿಷ್ಟು ಶ್ರಮದಾನ ಮಾಡಬಹುದು. ಆಮೇಲೆ ಬರೇ ನಿಂಬೆ ಜ್ಯೂಸ್ ಕುಡಿದು ರಿಲ್ಯಾಕ್ಸ್ ಮಾಡಿಕೊಳ್ಳಲು ಸಾಧ್ಯವೆ?’ ಎಂದ.
‘ಛೇ ಛೇ ಖಂಡಿತ ಸಾಧ್ಯವಿಲ್ಲ’ ಎಂದೊಪ್ಪಿದೆ.
‘ಅದಕ್ಕೆ ಬೇರೆ ಯಾವುದಾದರೂ ಪಾರ್ಟಿ ಇದೆಯೆ ಹುಡುಕಿ ಹೇಳು’ ಎಂದು ಆ ಕೆಲಸ ನನಗೊಪ್ಪಿಸಿದ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.