ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಮ್ತಾಜ್ ಕನಸು

Last Updated 23 ಫೆಬ್ರುವರಿ 2020, 20:05 IST
ಅಕ್ಷರ ಗಾತ್ರ

‘ಜಹಾಂಪನಾ... ಗೋರಿಯೊಳಗೆ ಮಲಗಿ, ಮಲಗೀ ಬೇಸರವಾಗಿದೆ, ಹೊರಗೆ ಉದ್ಯಾನದಲ್ಲಿ ಸುತ್ತಾಡಲು ಹೋಗೋಣವೇ...’ ಮುಮ್ತಾಜ್ ಆಸೆಯಿಂದ ಕೇಳಿದಳು.

‘ಓಹ್‍... ಖಂಡಿತಾ ಬೇಡ ಬೇಗಂ. ಇಂದು ಅಮೆರಿಕೆಯ ದೊಡ್ಡಣ್ಣ ಬರುವನಂತೆ. ಯಾರಿಗೂ ಪ್ರವೇಶವಿಲ್ಲವಂತೆ. ಇದು ಶಿವನ ದೇವಾಲಯವಾಗಿತ್ತು ಎಂದೆಲ್ಲ ಮೊದಲೇ ಗುಲ್ಲೆಬ್ಬಿಸಿದ್ದಾರೆ. ಇಲ್ಲಿಂದ ಒಮ್ಮೆ ಎದ್ದು ಹೋದರೆ ಅಷ್ಟೇ... ನಮ್ಮನ್ನು ಗೋರಿಯಿಂದಲೂ ಓಡಿಸುತ್ತಾರೆ. ಪೌರತ್ವದ ಯಾವ ದಾಖಲೆಯೂ ನಮ್ಮ ಬಳಿಯಿಲ್ಲ’ ಷಹಜಹಾನ್ ಕಳವಳದಿಂದ ಹೇಳಿದ.

‘ಆಗ್ರಾವನ ಎಂದೇನೋ ಈ ನಗರದ ಹೆಸರು ಬದಲಿಸುತ್ತಾರಂತೆ, ನಿಜವೇ ಜಹಾಂಪನಾ?’ ಮುಮ್ತಾಜ್ ಕೇಳಿದಳು. ‘ಮೆತ್ತಗೆ ಮಾತನಾಡು ಪ್ರಿಯೆ. ದೊಡ್ಡಣ್ಣನನ್ನು ಖುದ್ದು ಕರೆದು ತರಲಿರುವ ಯೋಗಿವರ್ಯರು ಎಲ್ಲೆಡೆ ಅದೇನೋ ಸಿ.ಸಿ ಟಿ.ವಿ ಕ್ಯಾಮೆರಾ, ಗುಪ್ತಕಿವಿಗಳನ್ನು ಇರಿಸಿದ್ದಾರಂತೆ...’

‘ಸೋನಭದ್ರ ಜಿಲ್ಲೆಯಲ್ಲಿ ಮೂರು ಸಾವಿರ ಟನ್ನಿಗಿಂತಲೂ ಅಧಿಕ ಬಂಗಾರವಿರುವುದಂತೆ. ಅದನ್ನೆಲ್ಲ ತೆಗೆದರೆ, ಮುಂದಿನ ಸಲ ದೊಡ್ಡಣ್ಣ ಬರುವಷ್ಟರಲ್ಲಿ ಅಹಮದಾಬಾದ್ ಮಾತ್ರವೇಕೆ, ಎಲ್ಲ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳ ಪಕ್ಕದ ಕೊಳೆಗೇರಿಗಳು ಕಾಣದಂತೆ ಚಿನ್ನದ ತಗಡಿನ ಗೋಡೆಯನ್ನೇ ಮೇಲೇರಿಸಬಹುದಲ್ಲವೇ...’ ಮುಮ್ತಾಜ್ ಲೆಕ್ಕ ಹಾಕುತ್ತ ಕೇಳಿದಳು.

‘ಸುದ್ದಿ ಹಬ್ಬಿದ್ದೇನೋ ನಿಜ ಬೇಗಂ. ಆದರೇನು ಮಾಡುವುದು... ಭೂಸರ್ವೇಕ್ಷಣಾ ಇಲಾಖೆಯವರು ಸತ್ಯಹರಿಶ್ಚಂದ್ರನ ಮೊಮ್ಮಕ್ಕಳೆಂಬಂತೆ ಸತ್ಯವನ್ನೇ ನುಡಿದುಬಿಟ್ಟರಲ್ಲ. 3,350 ಟನ್ ಚಿನ್ನ ಅಲ್ಲವಂತೆ. 52 ಸಾವಿರ ಟನ್ ಕಚ್ಚಾ ಅದಿರನ್ನು ಕುಟ್ಟಿ ಪುಡಿ ಮಾಡಿ ತೆಗೆದರೆ, ಬರೀ 160 ಕೆ.ಜಿ ಬಂಗಾರ ಸಿಗುವುದಂತೆ!’

‘ಅಷ್ಟಕ್ಕಾಗಿ ಎರಡು ಬೆಟ್ಟ ಅಗೆಯುವುದಕ್ಕಿಂತ ತಿರುಪತಿ ತಿಮ್ಮಪ್ಪನಲ್ಲಿ ಇರುವ 9,000 ಟನ್ ಚಿನ್ನದಲ್ಲಿ ಸ್ವಲ್ಪ ಪಾಲು ಕೇಳಬಹುದಲ್ಲವೇ? ಹಿಂದೂಸ್ತಾನದ ಎಲ್ಲ ದೇಗುಲಗಳು ತಮ್ಮಲ್ಲಿರುವ ಚಿನ್ನ ತೆಗೆದುಕೊಟ್ಟರೆ, ಭರತಖಂಡದ ಎಲ್ಲ ಕೊಳೆಗೇರಿಗಳ ಸುತ್ತ ಚಿನ್ನದ ಗೋಡೆ ಮೇಲೇರಿಸಬಹುದು’- ಈ ಮಾತು ಯೋಗಿವರ್ಯರ ಗುಪ್ತಕಿವಿಗಳಿಗೆ ಬಿದ್ದರೆ ಎಂದು ಬೆದರಿದ ಷಹಜಹಾನ್ ಮೊದಲು ಮುಮ್ತಾಜಳ ಬಾಯಿ ಮುಚ್ಚಿದ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT