ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಾ’ ಲೆಕ್ಕಾಚಾರ

Last Updated 24 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಶುಕ್ರವಾರದಿಂದ ಮನೆಗೆ ಬರದಿದ್ದ ಬೆಕ್ಕಣ್ಣ ಶನಿವಾರ ಸಂಜೆ ಆಕಳಿಸುತ್ತಾ ಬಂದಿತು. ‘ಏನ್ ಮಸ್ತ್ ಡೇ & ನೈಟ್ ಮ್ಯಾಚ್‍ ಅಂತೀ... ಭಯಂಕರ ಥ್ರಿಲ್ ಇತ್ತವ್ವಾ’ ಎಂದು ಶುರುವಿಟ್ಟಿತು.

‘ಪಿಂಕ್ ಟೆಸ್ಟ್ ನೋಡಕ್ಕೆ ಕೋಲ್ಕತ್ತಗೆ ಹೋಗಿದ್ಯೇನು’ ನನ್ನ ಪ್ರಶ್ನೆಗೆ ಬೆಕ್ಕಣ್ಣ ಪಕಪಕನೆ ನಕ್ಕಿತು. ‘ಕ್ರಿಕೆಟ್ ನೋಡಾಕ ಎದಕ್ಕ ಹೋಗೂದು. ಅದ್ ರೆಕಾರ್ಡ್ ಆಗಿರ್ತದ, ಯಾವಾಗ್ ಬೇಕಾದಾಗ ನೋಡಬೌದು. ಮಹಾರಾಷ್ಟ್ರದಾಗೆ ಆಫ್‌ ದಿ ರೆಕಾರ್ಡ್ ಮ್ಯಾಚ್ ನಡೀತಲ್ಲ, ಆ ‘ಮಹಾ’ರಾತ್ರಿ ಮ್ಯಾಚ್ ನೋಡಾಕ ಹೋಗಿದ್ದೆ. ರಾಷ್ಟ್ರಪತಿ ಭವನದಿಂದ ಹಿಡಿದು ಕಮಲಕ್ಕನ ಮಂದಿ ತನಕ ಎಲ್ಲಾರೂ ರಾತ್ರಿನೂ ಒಂದ್ ಚೂರೂ ನಿದ್ರೆ ಮಾಡ್ದೆ, ಎಷ್ಟ್ ಕೆಲಸ ಮಾಡ್ತಾರ, ದೇಶದ ಉದ್ಧಾರ ಮಾಡ್ತಾರ...’ ಗುಣಗಾನ ಶುರುಮಾಡಿತು.

‘ತಮಗ ಬೇಕಾದಾಗ ರಾಷ್ಟ್ರಪತಿ ಆಡಳಿತ ಹೇರೂದು, ಬ್ಯಾಡಾದಾಗ ತೆಗಿಯೂದು ಅಂದ್ರ ಪ್ರಜಾಪ್ರಭುತ್ವದ ಕಗ್ಗೊಲಿ ಮಾಡಿದಂಗ ಅಲ್ಲೇನು’ ನಾನು ಕೇಳಿದೆ.

‘ಪ್ರಜಾಪ್ರಭುತ್ವ, ಕಗ್ಗೊಲಿ ಅಂತೆಲ್ಲ ಎಲ್ಲೀದ್ ಹಚ್ಚೀದಿ ತೆಗಿ ಅತ್ತಾಗ. ರಾಜಕಾರಣದಾಗ ಬರೇ ಡೇ ಮ್ಯಾಚ್ ನಡೀಯಂಗಿಲ್ಲ. ಮಹತ್ವದ ಪಂದ್ಯ ನಡಿಯೂದೆಲ್ಲ ರಾತ್ರಿ ವಳಗನ. ಗಣಿತದಾಗ ಪ್ರೊಬ್ಯಾಬಿಲಿಟಿ, ಸಂಭವನೀಯತೆ ಅಂತಾರಲ್ಲ, ಅದ್ರ ಪ್ರಕಾರ ಎಷ್ಟ್ ಸಮೀಕರಣ ಸಂಭಾವ್ಯ ಆಗ್ತದ ಅನ್ನೋ ನಿಮ್ಮ ಲೆಕ್ಕಾಚಾರ ಮೀರಿಸೋ ಸಮೀಕರಣ ನಮೋ, ಶಾಣ್ಯಾರಿಗೆ ಹೊಳಿತದ. ನೋಡು ಹೆಂಗೆ ದೇವೇಂದ್ರನ ದರ್ಬಾರು ಶುರು ಮಾಡಿದ್ರಲ್ಲ, ಮೆಚ್ಚಬೇಕು’ ಎಂದ ಬೆಕ್ಕಣ್ಣ
ಇ–ಮೇಲ್ ಬರೆಯಲು ಶುರುಮಾಡಿತು.

‘ನಮ್ ಮಾರ್ಜಾಲ ಸಂಘದ ಚುನಾವಣೆ ಬಂತಲ್ಲ, ನನ್ನ ಅಧ್ಯಕ್ಷ ಮಾಡಿ, ಇನ್ನುಳಿದ ಸ್ಥಾನಕ್ಕೆ ಕುರ್ಚಿಗಿ ಇಂತಿಷ್ಟು ಅಂತ ಹರಾಜು ಹಾಕ್ರಿ, ಚುನಾವಣಿಗೆ ಖರ್ಚ್ ಮಾಡೂ ಕೋಟಿಗಟ್ಟಲೆ ರೊಕ್ಕನೂ ಉಳೀತದ, ಜೊತಿಗಿ ಹರಾಜಿನ್ ರೊಕ್ಕನೂ ಬರ್ತದ. ಹಂಗ ಉಳಿದಿದ್ದ ರೊಕ್ಕನಾ ಜೆಎನ್‍ಯುದಾಗ ಕಲಿಯೂ ಮಕ್ಕಳಿಗಿ ಹಾಸ್ಟೆಲ್ ಫೀ ತುಂಬಾಕೆ ಬಳಸ್ಕೋರಿ ಅಂತ ನಮ್ ‘ಪ್ರಾಣಿ ಸುಪ್ರೀಂ ಕೋರ್ಟ್‌’ಗಿ ಬರೆಯಾಕ ಹತ್ತೀನಿ’ ಎಂದು ಕೊಂಕುನಗೆ ಬೀರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT