ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಪದಾರ್ಥ ಚಿಂತಾಮಣಿ

Last Updated 11 ಡಿಸೆಂಬರ್ 2022, 19:31 IST
ಅಕ್ಷರ ಗಾತ್ರ

‘ಒದ್ದಾಟ, ಪರದಾಟಕ್ಕೆ ಏನು ವ್ಯತ್ಯಾಸ ಹೇಳು ನೋಡಾಮು’ ಬೆಕ್ಕಣ್ಣ ಭಾರಿ ಗಂಭೀರವಾಗಿ ಪ್ರಶ್ನಿಸಿತು.

ಥಟ್ಟನೆ ಉತ್ತರ ಹೊಳೆಯದೇ ತಲೆ ಕೆರೆದುಕೊಂಡೆ.

‘ಡಿಕೆಶಿ ಮಾಮಂದು ಒದ್ದಾಟ ಅಲ್ಲ, ಪರದಾಟ ಅಂತ ನಮ್ಮ ಅಶೋಕಣ್ಣ ಹೇಳ್ಯಾನ. ಅದಕ್ಕೇ ಕೇಳಿದೆ’ ಎಂದು ಸುದ್ದಿ ತೋರಿಸಿತು.

‘ಗುಜರಾತವಳಗ ಕಾಂಗ್ರೆಸ್ ಹದಿನೇಳು ಸೀಟು ಗೆಲ್ಲೋ ಪ್ರಯತ್ನ ಮಾಡಿತಲ್ಲ, ಅದು ಒದ್ದಾಟ. ಹಿಮಾಚಲ ಪ್ರದೇಶದಾಗೆ ಆಪರೇಷನ್ ಕಮಲ ಮಾಡೋ ಚಾನ್ಸ್ ಕೈತಪ್ಪಿತಲ್ಲ ಅಂತ ಬಿಜೆಪಿ ಬವಣೆಪಡ್ತಾ ಇದೆಯಲ್ಲ, ಅದು ಪರದಾಟ’ ಅಂದೆ.

‘ದೆಹಲಿ ಮುನ್ಸಿಪಾಲ್ಟಿ ಚುನಾವಣೆದಾಗೆ ಎಎಪಿ ಬಿಜೆಪಿನ ಹಣಿಯಿತಲ್ಲ, ಅದು ಯಾವ ಕೆಟಗರಿವಳಗ ಬರತೈತಿ?’

‘ಅದು ಎಎಪಿ- ಬಿಜೆಪಿ ಗುದ್ದಾಟ. ಕೈಪಕ್ಷದ್ದು ಸೋಲಾಟ. ಅದೆಲ್ಲ ಬಿಡಲೇ... ನೋಡಿಲ್ಲಿ, ಮ್ಯಾಂಡಸ್ ಚಂಡಮಾರುತ ಎಷ್ಟು ಹಾವಳಿ, ಹಾನಿ ಮಾಡೈತಿ ಅಂತ. ತಮಿಳುನಾಡಿನಾಗೆ ಐವರು ಸತ್ತವರೆ. ಏನೇ ಅಂದ್ರೂ ಈ ಚಂಡಮಾರುತ ಬಡವರ ಮೇಲೆ ಬ್ರಹ್ಮಾಸ್ತ್ರ ಬೀಸತೈತಿ’ ಎಂದೆ.

‘ನಾವು ಎದಕ್ಕ ಮ್ಯಾಂಡಸ್ ಅಂತ ಅರೇಬಿಕ್ ಹೆಸರಿಂದ ಕರೀಬಕು? ನಮ್ಮ ರಾಜ್ಯದಾಗೆ ಆ ಚಂಡಮಾರುತ ಮಾಡೋ ಹಾನಿಗೆ ನಮ್ಮ ಹೆಸರಿಂದ ಕರಿಯೂಣು. ಮಹಾಮಾರಿ ಅಂತ ಕನ್ನಡದ ಹೆಸರು ಇಡೂಣು’ ಎನ್ನುತ್ತ ಬೆಕ್ಕಣ್ಣ ಇನ್ನು ಮುಂದೆ ಕೆಲವು ದೇವಸ್ಥಾನಗಳಲ್ಲಿ ಪೂಜೆಗೆ ಸಲಾಂ ಹೆಸರು ಬದಲಿಗೆ, ನಮಸ್ಕಾರ ಹೆಸರು ಬಳಸುವುದು ಎಂಬ ಸುತ್ತೋಲೆಯ ಸುದ್ದಿ ತೋರಿಸಿತು.

‘ಬರೋಬ್ಬರಿ ಅದ ಮತ್ತ. ನಮ್ಮ ಪದ್ಧತಿಗಳಿಗೆ ನಮ್ಮ ಭಾಷೆ ಪದನೇ ಬಳಸಬಕು. ಆದರೆ ಮೊದಲು ಮುಜರಾಯಿ ಇಲಾಖೆ ಹೆಸರೇ ಬದಲು ಮಾಡಬೇಕಾತೈತಿ. ಎದಕ್ಕಂದ್ರ ಮುಜರಾಯಿ ಅನ್ನೂ ಪದನೇ ಹಿಂದಿ ಪದ’ ನಾನೂ ಯೋಚನೆಗೆ ಬಿದ್ದೆ.

‘ಹ್ಹೆಹ್ಹೆ... ಹಿಂದಿ ನಮ್ಮ ರಾಷ್ಟ್ರಭಾಷೆ, ಹಂಗಾಗಿ ಆ ಪದ ಇದ್ದರ ಅಡ್ಡಿಲ್ಲ... ಅರೇಬಿಕ್ ಪದ ಇದ್ದರಷ್ಟೇ ಬದಲು ಮಾಡೂಣು’ ಎಂದು ಬೆಕ್ಕಣ್ಣ ಹಲ್ಲುಕಿರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT