ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಕೊರೊನಾ ಕಾನೂನು

Last Updated 28 ಜುಲೈ 2020, 21:32 IST
ಅಕ್ಷರ ಗಾತ್ರ

‘ಕೊರೊನಾದಿಂದ ನಮ್ಮ ಇಲಾಖೆ ರೂಲ್ಸು- ರೆಗ್ಯುಲೇಷನ್ಸ್ ಬದಲಾಗಿಬಿಟ್ಟಿವೆ...’ ಡ್ಯೂಟಿ ಮುಗಿಸಿ ಬಂದ ಪೊಲೀಸ್ ಕಾನ್‌ಸ್ಟೆಬಲ್‌ ಶಂಕ್ರಿ ಗೊಣಗಿಕೊಂಡರು.

‘ಹೌದೇನ್ರೀ?!...ಇತರ ಇಲಾಖೆ ಥರಾ ಶನಿವಾರ, ಭಾನುವಾರ ಪೊಲೀಸ್ ಸ್ಟೇಷನ್ ಬಾಗಿಲು ಹಾಕಿ, ನಿಮಗೆ ರಜೆ ಕೊಡ್ತಾರೇನ್ರೀ?’ ಪತ್ನಿ ಸುಮಿ ಆಸೆಪಟ್ಟರು.

‘ಹಬ್ಬ-ಹರಿದಿನ, ಕ್ಯಾಲೆಂಡರ್‌ನಲ್ಲಿ ಕೆಂಪು ಅಂಕಿ ಇರೋ ದಿನ ರಜೆ ಇರುವ ಕೆಲಸ ಅಲ್ಲ ನಮ್ಮದು... ಪೊಲೀಸ್ ಸ್ಟೇಷನ್ನಿಗೆ ಬೀಗ ಹಾಕಿದ ಇತಿಹಾಸವೇ ಇಲ್ಲ. ಆದರೆ ಕೊರೊನಾ, ಇತಿಹಾಸ ಬದಲಾಯಿಸಿ ಪೊಲೀಸ್ ಸ್ಟೇಷನ್‍ಗಳು ಸೀಲ್‍ಡೌನ್ ಆಗುವಂತೆ ಮಾಡಿಬಿಟ್ಟಿದೆ’.

‘ಸ್ಟೇಷನ್‍ಗಳು ಸೀಲ್‍ಡೌನ್ ಆಗಿಬಿಟ್ಟರೆ ನೀವು ಕಾನೂನು-ಸುವ್ಯವಸ್ಥೆ ಕಾಪಾಡುವುದು ಹೇಗೆ?’

‘ಕಷ್ಟ, ಈ ಮೊದಲು ಕಳ್ಳನನ್ನು ಹಿಡಿದರೆ ನಮಗೆ ಅವಾರ್ಡ್ ಸಿಗುತ್ತಿತ್ತು, ಈಗ ಆಸ್ಪತ್ರೆ ವಾರ್ಡ್...’ ಶಂಕ್ರಿಗೆ ಬೇಸರ.

‘ಕಳ್ಳನನ್ನು ಹಿಡಿದು ವಿಚಾರಣೆ ಮಾಡಿದ ಮೇಲೆ ಕಾನೂನು ಪ್ರಕಾರ ಕೋರ್ಟಿಗೆ ಹಾಜರುಪಡಿಸಬೇಕು ಅಲ್ವೇನ್ರೀ?’

‘ಹೌದು, ಈಗ ಈ ಕಾನೂನನ್ನೇ ಕೊರೊನಾ ಬದಲಾಯಿಸಿಬಿಟ್ಟಿದೆ. ಕಳ್ಳನನ್ನು ಹಿಡಿದ ಮೇಲೆ ಕೋರ್ಟಿನ ಬದಲು ಕೋವಿಡ್ ಟೆಸ್ಟಿಗೆ ಕಳುಹಿಸಿ ಆಸ್ಪತ್ರೆಗೆ ಅಡ್ಮಿಟ್ ಮಾಡಬೇಕು. ನೆಗೆಟಿವ್ ವರದಿ ಬಂದರೆ ಕಳ್ಳನಿಗೆ ಪನಿಷ್‍ಮೆಂಟ್, ಪಾಸಿಟಿವ್ ಬಂದರೆ ಕಳ್ಳನ ಜೊತೆ ಪೊಲೀಸರಿಗೂ ಆಸ್ಪತ್ರೆಯಲ್ಲಿ ಟ್ರೀಟ್‍ಮೆಂಟ್’.

‘ಕಳ್ಳನನ್ನು ಮುಟ್ಟದಂತೆ ಅಂತರ ಕಾಪಾಡಿಕೊಂಡು ಹಿಡಿಯಲು ಆಗೊಲ್ಲವೇನ್ರೀ?’

‘ಹೇಗೆ ಸಾಧ್ಯ, ಕೈ ಮುಗಿತೀನಿ ಸ್ಟೇಷನ್ನಿಗೆ ಬನ್ನಿ ಅಂದರೆ ಕಳ್ಳರು ಬರ್ತಾರಾ...? ಕೊರಳಪಟ್ಟಿ ಹಿಡಿದು ಎಳಕೊಂಡು ಬರಬೇಕು’.

‘ಬೇರೆಯವರು ಮಾತ್ರ ಆನ್‍ಲೈನ್‍ನಲ್ಲಿ ಕೆಲಸ ಮಾಡ್ತಿದ್ದಾರೆ, ನಿಮ್ಮ ಇಲಾಖೆಯಲ್ಲೂ ಆನ್‍ಲೈನ್‍ನಲ್ಲಿ ಕಳ್ಳರನ್ನು ಹಿಡಿಯುವ ವ್ಯವಸ್ಥೆ ಮಾಡಬೇಕು... ಇಲ್ಲವೇ ಯೂನಿಫಾರಂ ಬದಲು ಪಿಪಿಇ ಕಿಟ್ ಧರಿಸಿ ಡ್ಯೂಟಿ ಮಾಡಲು ಅವಕಾಶ ಕೊಡಬೇಕು...’ ಸುಮಿ ನಿಷ್ಠುರವಾಗೇ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT