ಶನಿವಾರ, ಜೂನ್ 25, 2022
25 °C

ಚುರುಮುರಿ: ಭವಿಷ್ಯ ಚಿತ್ರಾಸನ

ಸುಮಂಗಲಾ Updated:

ಅಕ್ಷರ ಗಾತ್ರ : | |

Prajavani

ಬೆಕ್ಕಣ್ಣ ಕೈಯಲ್ಲಿ ಚಿಕ್ಕ ಕೋಲಿನಂಥದನ್ನು ಹಿಡಿದುಕೊಂಡು ಏನೋ ಚಿತ್ರವಿಚಿತ್ರ ಆಸನಗಳನ್ನು ಮಾಡುತ್ತಿತ್ತು. ತುಸುಹೊತ್ತಿನ ನಂತರ ಹತ್ತಾರು ವಿವಿಧ ಭಂಗಿಯ ಯೋಗಾಸನಗಳ ರೇಖಾಚಿತ್ರವನ್ನು ಬಲೇ ಸೊಗಸಾಗಿ ಬಿಡಿಸಿತ್ತು.

‘ಏನಲೇ... ಯಾವ ಯೋಗ ಗುರುಗಳ ಹತ್ರ ಇವೆಲ್ಲ ಕಲಿತ್ಯಲೇ...’ ಅಚ್ಚರಿಯಿಂದ ಕೇಳಿದೆ.

‘ಯಾರ್ ಹತ್ರ ಏನ್ ಕಲಿಯದು? ನಾನೇ ಎಲ್ಲ ಕಂಡುಹಿಡಿದೀನಿ. ಮುಂದಿನ ತಿಂಗಳು ಮೈಸೂರಿನಾಗೆ ಯೋಗ ದಿನಾಚರಣೆಗೆ ಮೋದಿ ಮಾಮಾ ಬರತಾನ... ಆವಾಗ ಇವೆಲ್ಲ ಮಾಡಿ ತೋರಿಸತೀನಿ’ ಎಂದು ಹೆಮ್ಮೆಯಿಂದ ಉಲಿಯಿತು.

‘ಇನ್ನಾ ಒಂದ್ ತಿಂಗಳು ಐತಲ್ಲ’.

‘ತ್ರಿಶೂಲಾಸನ, ಬಂದೂಕಾಸನ, ಘರ್ಜಿಸಾಸನ, ಬಾಯಿಮುಚ್ಚಿಸಾಸನ, ವಿತಂಡವಾದಾಸನ, ಹೀಂಗ ಇವೆಲ್ಲ ಹೊಸ ನಮೂನಿ ಆಸನಗಳು. ಇವನ್ನು ಯಾರು, ಯಾವಾಗ, ಹೆಂಗ ಮಾಡಬಕು, ಅಂದರ ಕಾರ್ಯಕರ್ತರು, ಶಾಸಕರು, ಸಚಿವರು ಯಾವ ಆಸನಗಳನ್ನು ಯಾವಾಗ ಮಾಡಬಕು ಅಂತ ಬ್ರೋಶರ್ ತಯಾರಿ ಮಾಡಬಕು. ಜೊತಿಗಿ ನಾನೇ ಇವನ್ನೆಲ್ಲ ಮಾಡಿ ತೋರಿಸಿ ವಿಡಿಯೊ ಮಾಡಬಕು. ಭಯಂಕರ ಕೆಲಸ ಐತಿ’.

‘ಬರೀ ಕಮಲಕ್ಕನ ಮನಿಯೋರಿಗಷ್ಟೇ ಏನು?’

‘ಹಂಗೇನಿಲ್ಲ... ಕುಮಾರಣ್ಣಂಗೆ ಕಣ್ಣೀರಾಸನ, ಕಾಂಗಿಗಳಿಗೆ ಜಡಾಸನ... ಹೀಂಗ ಇನ್ನೂ ಭಾಳ ಅದಾವು’.

‘ಮತ್ತ ಶ್ರೀಸಾಮಾನ್ಯರಿಗೆ?’

‘ನೀವು ಶ್ರೀಸಾಮಾನ್ಯರು ಎದ್ದು ಪ್ರತಿಭಟನೆ ಮಾಡೂ ಕಾಲಕ್ಕೆ ಶವಾಸನ, ಮಾತನಾಡೂ ಕಾಲಕ್ಕೆ ಮೌನಾಸನ ಮಾಡ್ತಾನೇ ಇದೀರಲ್ಲ, ನಿಮಗ ಇನ್ಯಾವ ಹೊಸ ಆಸನನೂ ಬ್ಯಾಡ. ಮೋದಿಮಾಮ, ನಿರ್ಮಲಕ್ಕ, ಶಾಣೇ ಅಂಕಲ್ಲಿಗೆ ಭಾರೀ ಸ್ಪೆಷಲ್ ಆಸನಾ ಐತಿ. ಭವಿಷ್ಯ ಚಿತ್ರಾಸನ... ಮುಂದಿನ 25 ವರ್ಷಗಳಲ್ಲಿ ದೇಶ ಅವರ ಕೈಯಾಗೆ ಹೆಂಗ ವಿಕಾಸ ಆಗತೈತಿ ಅಂತ ಈ ಆಸನದಾಗೆ ಅವರು ತೋರಿಸಿ, ಮೋಡಿ ಮಾಡತಾರ’. ನಾನು ಬೆಚ್ಚಿಬಿದ್ದು ಮೌನಾಸನಕ್ಕೆ ಶರಣಾದೆ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು